ಚುನಾವಣಾ ಫಲಿತಾಂಶದ ಪರಿಶೋಧನೆ ನಡೆಸದೆ ಪಾಕಿಸ್ತಾನಕ್ಕೆ ಸಾಲ ನೀಡಬೇಡಿ: ಐಎಂಎಫ್‍ಗೆ ಇಮ್ರಾನ್‍ಖಾನ್ ಆಗ್ರಹ
ಇಸ್ಲಾಮಾಬಾದ್: ದೇಶದಲ್ಲಿ ಫೆಬ್ರವರಿ 8ರಂದು ನಡೆದ ಚುನಾವಣೆಯ ಮೌಲ್ಯಮಾಪನ(ಪರಿಶೋಧನೆ) ನಡೆಸದೆ ಯಾವುದೇ ಹೊಸ ಸಾಲ ನೀಡಬಾರದು ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ, ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷದ ಮುಖಂಡ ಇಮ್ರಾನ್‍ಖಾನ್ ಐಎಂಎಫ್ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಈ ಬಗ್ಗೆ ಐಎಂಎಫ್‍ಗೆ ಪತ್ರ ಬರೆಯಲಾಗಿದೆ. “ಇಂತಹ ಪರಿಸ್ಥಿತಿಯಲ್ಲಿ ದೇಶಕ್ಕೆ ಸಾಲ ದೊರೆತರೆ, ಅದನ್ನು ತೀರಿಸುವವರು ಯಾರು? ದೇಶದ ಮೇಲಿನ ಸಾಲದ ಹೊರೆಯನ್ನು ಇದು ಹೆಚ್ಚಿಸಲಿದೆ ಮತ್ತು ದೇಶವನ್ನು ಮತ್ತಷ್ಟು ಬಡತನಕ್ಕೆ ತಳ್ಳಲಿದೆ” ಎಂದು ಇಮ್ರಾನ್‍ಖಾನ್ ಹೇಳಿರುವುದಾಗಿ ಎಎನ್‍ಐ ವರದಿ ಮಾಡಿದೆ.
ಹೊಸ ಸಾಲ ನೀಡುವ ಮುನ್ನ ಚುನಾವಣೆಯ ಮೌಲ್ಯಮಾಪನ ನಡೆಸುವಂತೆ ಐಎಂಎಫ್‍ಗೆ ಇಮ್ರಾನ್‍ಖಾನ್ ಪತ್ರ ಬರೆದಿರುವುದನ್ನು ಪಿಟಿಐ ಮುಖಂಡ ಆಲಿ ಝಪರ್ ದೃಢಪಡಿಸಿದ್ದಾರೆ. ಆದರೆ ಇಮ್ರಾನ್‍ರ ಬೇಡಿಕೆಯನ್ನು ಕಡೆಗಣಿಸಿರುವ ಐಎಂಎಫ್, ಹೊಸ ಸರಕಾರದ ಜತೆ ಕೆಲಸ ಮಾಡಲು ಇಚ್ಛೆ ವ್ಯಕ್ತಪಡಿಸಿದೆ ಎಂದು `ದಿ ನ್ಯೂಸ್ ಇಂಟರ್ ನ್ಯಾಷನಲ್' ವರದಿ ಮಾಡಿದೆ.
ಈ ಮಧ್ಯೆ, ಐಎಂಎಫ್‍ಗೆ ಪತ್ರ ಬರೆದಿರುವ ಬಗ್ಗೆ ಇಮ್ರಾನ್ ಖಾನ್‍ರನ್ನು ಪಿಎಂಎಲ್-ಎನ್ ಮುಖಂಡ , ಪಾಕಿಸ್ತಾನದ ಮಾಜಿ ವಿತ್ತಸಚಿವ ಇಷಾಖ್ ದಾರ್ ಟೀಕಿಸಿದ್ದಾರೆ. “ಈ ಪತ್ರಕ್ಕೆ ಯಾವುದೇ ಮಹತ್ವವಿಲ್ಲ ಮತ್ತು ಇಮ್ರಾನ್‍ಖಾನ್ ಅವರ ನಡೆ ಖಂಡನೀಯ. ವೈಯಕ್ತಿಕ ಲಾಭಕ್ಕಾಗಿ ಈ ರೀತಿ ನಡೆದುಕೊಳ್ಳುವುದು ನಾಚಿಕೆಗೇಡಿನ ಕೆಲಸ” ಎಂದವರು ಹೇಳಿದ್ದಾರೆ.
ಕಳೆದ ವರ್ಷ ಪಾಕಿಸ್ತಾನ ಐಎಂಎಫ್‍ನಿಂದ ಅಲ್ಪಾವಧಿಯ 3 ಶತಕೋಟಿ ಡಾಲರ್ ಸಾಲವನ್ನು ಪಡೆಯಲು ಯಶಸ್ವಿಯಾಗಿದ್ದು ಇದರ ಅವಧಿ ಮುಂದಿನ ತಿಂಗಳು ಮುಕ್ತಾಯವಾಗಲಿದೆ. ಅಷ್ಟರೊಳಗೆ ದೀರ್ಘಾವಧಿಯ ಹೊಸ ಸಾಲವನ್ನು ಪಡೆಯಲು ಪಾಕಿಸ್ತಾನ ಉದ್ದೇಶಿಸಿದೆ.