ಭಾರತೀಯರಿಗೆ ಇ-ವೀಸಾ: ರಶ್ಯ ಘೋಷಣೆ

Update: 2023-07-29 19:01 GMT

ಮಾಸ್ಕೊ: ದೇಶಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ವೀಸಾ ಪ್ರಕ್ರಿಯೆಯನ್ನು ಸರಳಗೊಳಿಸಲು ಆಗಸ್ಟ್ 1ರಿಂದ ಇ-ವೀಸಾ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದ್ದು ಭಾರತ ಸೇರಿದಂತೆ 52 ದೇಶಗಳು ಇದಕ್ಕೆ ಅರ್ಹವಾಗಿವೆ ಎಂದು ರಶ್ಯ ಶನಿವಾರ ಘೋಷಿಸಿದೆ.

ರಶ್ಯದ ಸಾರ್ವಜನಿಕ ಭದ್ರತಾ ಇಲಾಖೆ ಇ-ವೀಸಾ ವ್ಯವಸ್ಥೆಯನ್ನು ರೂಪಿಸಿದ್ದು ಅರ್ಹ ದೇಶಗಳ ಪ್ರಜೆಗಳು ಅರ್ಜಿ ಸಲ್ಲಿಸಬಹುದಾಗಿದೆ. ಇ-ವೀಸಾವನ್ನು ಇತರ ಯಾವುದೇ ಸಾಮಾನ್ಯ ವೀಸಾದಂತೆ ಬಳಸಬಹುದು, ರಾಯಭಾರ ಕಚೇರಿಗಳು ಅಥವಾ ಇತರ ಯಾವುದೇ ಇಲಾಖೆಗಳೊಂದಿಗೆ ಪರಿಶೀಲಿಸುವ ಅಗತ್ಯ ಇರುವುದಿಲ್ಲ. ವ್ಯಾಪಾರ ಪ್ರವಾಸ, ಅತಿಥಿ ಭೇಟಿ, ಪ್ರವಾಸೋದ್ಯಮ ಹಾಗೂ ಇತರ ಉದ್ದೇಶಗಳಿಗಾಗಿ ರಶ್ಯ ಒಕ್ಕೂಟಕ್ಕೆ ಪ್ರವೇಶವನ್ನು ಇದು ಸುಗಮಗೊಳಿಸುತ್ತದೆ.

ಇಲೆಕ್ಟ್ರಾನಿಕ್ ವೀಸಾ ಅಥವಾ ಇ-ವೀಸಾವು ಇಲೆಕ್ಟ್ರಾನಿಕ್ ಮತ್ತು ಬಯೊಮೆಟ್ರಿಕ್ ವೀಸಾ ಆಗಿದ್ದು ಸಾಮಾನ್ಯ ವೀಸಾದಂತೆ ಅದೇ ಹಕ್ಕುಗಳನ್ನು ಹೊಂದಿರುತ್ತದೆ. ಒಮ್ಮೆ ಪಡೆದ ಇ-ವೀಸಾ 60 ದಿನಗಳವರೆಗೆ ಮಾನ್ಯವಾಗಿರುತ್ತದೆ ಮತ್ತು ರಶ್ಯದಲ್ಲಿ 16 ದಿನ ನೆಲೆಸಲು ಅವಕಾಶವಿರುತ್ತದೆ. ಕೋವಿಡ್ ಸಾಂಕ್ರಾಮಿಕದ ಪರಿಣಾಮವಾಗಿ ಜಾಗತಿಕ ಪ್ರಯಾಣಗಳ ನಿರ್ಬಂಧಗಳ ಕಾರಣ 2020ರಲ್ಲಿ ರಶ್ಯವು ಇ-ವೀಸಾ ಸೇವೆಯನ್ನು ಸ್ಥಗಿತಗೊಳಿಸಿತ್ತು. ಇದೀಗ ಈ ಸೇವೆಯನ್ನು ಪುನರಾರಂಭಿಸಲಾಗಿದ್ದು ರಶ್ಯಕ್ಕೆ ಪ್ರಯಾಣಿಸುವವರು ತಮ್ಮ ವೀಸಾಗಳನ್ನು ಸುಲಭದಲ್ಲಿ ಪಡೆಯಬಹುದಾಗಿದೆ. ರಶ್ಯಕ್ಕೆ ಭೇಟಿ ನೀಡಲು ಬಯಸುವ ಅರ್ಹ ವಿದೇಶದ ಪ್ರಯಾಣಿಕರು ಆನ್‍ಲೈನ್ ಪ್ರಕ್ರಿಯೆಯ ಮೂಲಕ ತಮ್ಮ ಪ್ರಯಾಣ ಅರ್ಜಿಗಳನ್ನು ಪೂರ್ಣಗೊಳಿಸಬೇಕು. ರಶ್ಯಕ್ಕೆ ಉದ್ದೇಶಿತ ಭೇಟಿ ದಿನದ ಕನಿಷ್ಟ 72 ಗಂಟೆಗಳ ಮೊದಲು ಅರ್ಜಿ ಸಲ್ಲಿಸಬೇಕು ಎಂದು ಇಲಾಖೆ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News