ಇಮ್ರಾನ್, ಖುರೇಷಿಗೆ ಗಣ್ಯ ಕೈದಿಗಳ ಸ್ಥಾನಮಾನ: ಆದರೆ ಜೈಲು ಕೆಲಸ ಕಡ್ಡಾಯ
ಇಸ್ಲಮಾಬಾದ್: ಜೈಲುಶಿಕ್ಷೆಗೆ ಗುರಿಯಾಗಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‍ಖಾನ್ ಮತ್ತು ಮಾಜಿ ವಿದೇಶಾಂಗ ಸಚಿವ ಶಾ ಮಹ್ಮೂದ್ ಖುರೇಷಿಗೆ ಗಣ್ಯ ಕೈದಿಗಳ ಸ್ಥಾನಮಾನ ನೀಡಲಾಗಿದೆ. ಆದರೆ ಜೈಲಿನ ಕಂಪೌಂಡ್ ಒಳಗೆ ಜೈಲು ಕೆಲಸ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು `ಎಕ್ಸ್‍ಪ್ರೆಸ್ ಟ್ರಿಬ್ಯೂನ್' ವರದಿ ಮಾಡಿದೆ.
ಸೈಫರ್ ಪ್ರಕರಣದಲ್ಲಿ ಅಪರಾಧಿಗಳೆಂದು ಘೋಷಿಸಲ್ಪಟ್ಟ 71 ವರ್ಷದ ಇಮ್ರಾನ್ ಖಾನ್ ಹಾಗೂ 67 ವರ್ಷದ ಖುರೇಷಿಯನ್ನು ಗರಿಷ್ಟ ಭದ್ರತೆಯ ಅಡಿಯಾಲ ಜೈಲಿನಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ಮಾಜಿ ಪ್ರಧಾನಿ ಹಾಗೂ ಮಾಜಿ ವಿದೇಶಾಂಗ ಸಚಿವರಾಗಿರುವ ಹಿನ್ನೆಲೆಯಲ್ಲಿ ಇವರನ್ನು ಗಣ್ಯ ಕೈದಿಗಳೆಂದು ಪರಿಗಣಿಸಲಾಗಿದೆ. ಇಬ್ಬರಿಗೂ ವ್ಯಾಯಾಮ ಸಾಧನ ಸಹಿತ ಹಲವು ವ್ಯವಸ್ಥೆಗಳನ್ನು ಒದಗಿಸಲಾಗಿದೆ. ಇಬ್ಬರಿಗೂ ಎರಡು ಜತೆ ಜೈಲಿನ ಸಮವಸ್ತ್ರ ನೀಡಲಾಗಿದೆ. ನ್ಯಾಯಾಲಯದ ಆದೇಶದಂತೆ ಇಬ್ಬರೂ ಜೈಲಿನ ಕಂಪೌಂಡ್‍ನ ಒಳಗೆ ಕೆಲಸ ಮಾಡಬೇಕಿದೆ. ಇಬ್ಬರಿಗೂ ಜೈಲಿನ ನಿಯಮಕ್ಕೆ ಅನುಸಾರ ತಮ್ಮ ಆಹಾರ ಸಿದ್ಧಪಡಿಸಿ ಸೇವಿಸಲು ಅವಕಾಶವಿದೆ ಎಂದು ವರದಿ ಹೇಳಿದೆ.