ಅಮೆರಿಕ ಚುನಾವಣೆಗೂ ಮುನ್ನ ಇವಿಎಂ ಹಿಂಪಡೆಯಲು ಆಗ್ರಹಿಸಿದ ಎಲಾನ್ ಮಸ್ಕ್
ನ್ಯೂಯಾರ್ಕ್: ಅಮೆರಿಕ ಚುನಾವಣೆಯಲ್ಲಿ ನಡೆಯುವ ಅಕ್ರಮಗಳ ಕುರಿತು ಪೋಸ್ಟ್ ಒಂದಕ್ಕೆ ಪ್ರತಿಕ್ರಿಯಿಸಿರುವ ಕೋಟ್ಯಧಿಪತಿ ಉದ್ಯಮಿ ಹಾಗೂ ಟೆಸ್ಲಾ ಸಿಇಒ ಎಲಾನ್ ಮಸ್ಕ್, ಅಮೆರಿಕಾ ಚುನಾವಣೆಗೂ ಮುನ್ನ ಇವಿಎಂ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ಇವಿಎಂಗಳನ್ನು ಹ್ಯಾಕಿಂಗ್ ಮಾಡುವ ಅಪಾಯ ಈಗಲೂ ಅತ್ಯಧಿಕವಾಗಿದೆ ಎಂದು ಅವರು ಹೇಳಿದ್ದಾರೆ.
ಇಂದು ಬೆಳಗ್ಗೆ, ಪ್ರಾಥಮಿಕ ಚುನಾವಣೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಸ್ವತಂತ್ರ ಅಭ್ಯರ್ಥಿಯಾಗಿರುವ ರಾಬರ್ಟ್ ಎಫ್. ಕೆನಡಿ ಆರೋಪಿಸಿದ್ದರು.
ಅಮೆರಿಕ ಪ್ರಜೆಗಳಿಗೆ ತಮ್ಮ ಮತಗಳೆಲ್ಲ ಎಣಿಕೆಯಾಗಿದೆಯೆ ಎಂಬುದು ಖಾತರಿಯಾಗಬೇಕು ಹಾಗೂ ಪ್ರಾಮಾಣಿಕ ಮತ್ತು ನ್ಯಾಯಯುತ ಚುನಾವಣೆಗಳು ನಡೆಯಲು ಮತ್ತೆ ಮತ ಪತ್ರಗಳಿಗೆ ಹಿಂದಿರುಗಬೇಕು ಎಂದು ಅವರು ಆಗ್ರಹಿಸಿದ್ದರು.
ಈ ಪೋಸ್ಟ್ ಅನ್ನು ಹಂಚಿಕೊಂಡಿರುವ ಮಸ್ಕ್, “ನಾವು ವಿದ್ಯುನ್ಮಾನ ಮತ ಯಂತ್ರಗಳನ್ನು ಹಿಂಪಡೆಯಬೇಕಿದೆ. ವಿದ್ಯುನ್ಮಾನ ಮತ ಯಂತ್ರಗಳನ್ನು ಮನುಷ್ಯರಿಂದ ಅಥವಾ ಕೃತಕ ಬುದ್ಧಿಮತ್ತೆಯಿಂದ ಹ್ಯಾಕಿಂಗ್ ಮಾಡುವ ಸಾಧ್ಯತೆ ಕೊಂಚ ಮಟ್ಟಿಗೆ ಇದೆಯಾದರೂ, ಅದರ ಅಪಾಯ ತೀರಾ ಅತ್ಯಧಿಕವಾಗಿದೆ” ಎಂದು ಬರೆದುಕೊಂಡಿದ್ದಾರೆ.
ಜೂನ್ 2ರಂದು ನ್ಯೂ ಪ್ರೋಗ್ರೆಸಿವ್ ಪಾರ್ಟಿ ಹಾಗೂ ಪಾಪ್ಯುಲರ್ ಡೆಮಾಕ್ರಟಿಕ್ ಪಾರ್ಟಿಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಪ್ಯೂರ್ಟೊ ರಿಕೊ ಪ್ರಾಥಮಿಕ ಚುನಾವಣೆಗಳನ್ನು ನಡೆಸಿತ್ತು. ಆದರೆ, ಎರಡೂ ಪಕ್ಷಗಳು ನೂರಾರು ಮತ ಪತ್ರಗಳನ್ನು ಅಸಮರ್ಪಕ ಫಲಿತಾಂಶ ತೋರಿಸುತ್ತಿರುವುದನ್ನು ವರದಿ ಮಾಡಿದ್ದವು. ಈ ಸಂಬಂಧ ಪಿಎನ್ಪಿಯ 700 ದೋಷಗಳನ್ನು ವರದಿ ಮಾಡಿದ್ದರೆ, ಪಿಪಿಡಿ ಸುಮಾರು 350 ಅಕ್ರಮಗಳನ್ನು ವರದಿ ಮಾಡಿದೆ.
ಇದಾದ ನಂತರ, ಚುನಾವಣಾ ಆಯೋಗವು ನೂರಾರು ಮತ ಪತ್ರ ಎಣಿಕೆ ಯಂತ್ರಗಳನ್ನು ಬಳಸಿಕೊಂಡು ಸಂಪೂರ್ಣ ಮತಗಳನ್ನು ಆಡಿಟಿಂಗ್ ಪೇಪರ್ ರಿಸೀಪ್ಟ್ಸ್ ನೊಂದಿಗೆ ಹೋಲಿಕೆ ಮಾಡಿತ್ತು.
ಯಾವ ಕಂಪನಿಗಳ ಮತಯಂತ್ರಗಳಲ್ಲಿ ಅಕ್ರಮಗಳು ಕಂಡು ಬಂದಿವೆಯೊ, ಅಂತಹ ಕಂಪನಿಗಳ ಗುತ್ತಿಗೆ ಅವಧಿಯನ್ನು ಪರಾಮರ್ಶಿಸಲಾಗುವುದು ಎಂದೂ ಚುನಾವಣಾ ಆಯೋಗವು ಹೇಳಿದೆ.