ಗಾಝಾ ಆಸ್ಪತ್ರೆಯಲ್ಲಿ ಎಲಾನ್ ಮಸ್ಕ್ ರ ಸ್ಟಾರ್‌ಲಿಂಕ್ ಉಪಗ್ರಹ ಇಂಟರ್‌ನೆಟ್ ಸೇವೆ ಸಕ್ರಿಯ
ಗಾಝಾ : ಯುಎಇ ಮತ್ತು ಇಸ್ರೇಲ್‌ನ ನೆರವಿನೊಂದಿಗೆ ಗಾಝಾ ಪಟ್ಟಿಯ ಆಸ್ಪತ್ರೆಯಲ್ಲಿ ಎಲಾನ್ ಮಸ್ಕ್ ಅವರ ಸ್ಟಾರ್‌ಲಿಂಕ್ ಉಪಗ್ರಹ ಇಂಟರ್‌ನೆಟ್ ಸೇವೆಯನ್ನು ಸಕ್ರಿಯಗೊಳಿಸಿರುವುದಾಗಿ ವರದಿಯಾಗಿದೆ.
ದಕ್ಷಿಣ ಗಾಝಾದ ರಫಾ ನಗರದ ಆಸ್ಪತ್ರೆಗಳಲ್ಲಿ ಸ್ಟಾರ್‌ಲಿಂಕ್ ಇಂಟರ್‌ನೆಟ್ ಸೇವೆ ಬಳಕೆಗೆ ಇಸ್ರೇಲ್ ಸರಕಾರ ಅನುಮೋದನೆ ನೀಡಿದ ಸುಮಾರು 5 ತಿಂಗಳ ಬಳಿಕ ಇಂಟರ್‌ನೆಟ್ ಸೇವೆಯನ್ನು ಸಕ್ರಿಯಗೊಳಿಸಲಾಗಿದೆ. `ಅಧಿಕ ವೇಗದ ಇಂಟರ್‌ನೆಟ್ ವ್ಯವಸ್ಥೆಯು ರಿಯಲ್-ಟೈಮ್ ವೀಡಿಯೊ ಕರೆ ಮೂಲಕ ಜೀವ ಉಳಿಸುವ ವೈದ್ಯಕೀಯ ಸಮಾಲೋಚನೆಗಳನ್ನು ಸಾಧ್ಯಗೊಳಿಸುತ್ತದೆ' ಎಂದು ಯುಎಇ ವಿದೇಶಾಂಗ ಸಚಿವಾಲಯ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ. ಪೂರೈಕೆದಾರರ ಕೇಂದ್ರಗಳನ್ನು ನಿರ್ವಹಿಸಲು ಇಂಧನ ಮತ್ತು ವಿದ್ಯುತ್ ಕೊರತೆಯಿಂದಾಗಿ ಗಾಝಾದಲ್ಲಿ ಇಂಟರ್‌ನೆಟ್ ಸಂಪರ್ಕ ಕಳಪೆಯಾಗಿದೆ. ಇದು ವೈದ್ಯಕೀಯ ಸಿಬ್ಬಂದಿ ಮತ್ತು ರಕ್ಷಣಾ ತಂಡಗಳ ಕೆಲಸವನ್ನು ಕಷ್ಟವಾಗಿಸುತ್ತದೆ ಹಾಗೂ ಆಸ್ಪತ್ರೆ ಸೇವೆಗಳು ಮತ್ತು ಆರೋಗ್ಯ ಸಚಿವಾಲಯದ ಕೇಂದ್ರೀಕೃತ ವ್ಯವಸ್ಥೆಯನ್ನು ನಿರ್ಬಂಧಿಸುತ್ತಿದೆ.