ಮಾನವ ಹಕ್ಕುಗಳ ಹೋರಾಟಗಾರ ಸಾಯಿಬಾಬಾ ಅವರ ಅಮಾನವೀಯ ಬಂಧನ ಅಂತ್ಯಗೊಳಿಸಿ: ಭಾರತಕ್ಕೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ತಜ್ಞರು ಆಗ್ರಹ
ಜಿನೇವಾ: ಮಾನವ ಹಕ್ಕುಗಳ ಹೋರಾಟಗಾರ ಅಂಗವಿಕಲ ಜಿ.ಎನ್. ಸಾಯಿಬಾಬಾ ಅವರನ್ನು ವಶದಲ್ಲಿ ಇರಿಸಿರುವ ಭಾರತವನ್ನು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ತಜ್ಞರು ಸೋಮವಾರ ತರಾಟೆಗೆ ತೆಗೆದುಕೊಂಡಿದ್ದಾರೆ.
ಜಿ.ಎನ್. ಸಾಯಿಬಾಬಾ ಅವರನ್ನು ವಶದಲ್ಲಿ ಇರಿಸಿರುವುದು ಅಮಾನವೀಯವಾಗಿದೆ ಎಂದು ಅವರು ಹೇಳಿದ್ದಾರೆ. ಜಿ.ಎನ್. ಸಾಯಿಬಾಬಾ ಅವರ ಆರೋಗ್ಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ತಜ್ಞರು, ಕೂಡಲೇ ಅವರನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿದ್ದಾರೆ.
ಮಾನವ ಹಕ್ಕುಗಳ ಹೋರಾಟಗಾರರ ಪರಿಸ್ಥಿತಿಯ ಕುರಿತ ವಿಶ್ವಸಂಸ್ಥೆಯ ವಿಶೇಷ ಅಧ್ಯಯನ ವರದಿಗಾರ್ತಿ ಮೇರಿ ಲಾವ್ಲೊರ್, ಭಾರತದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಹೋರಾಡುತ್ತಿರುವ ಜಿ.ಎನ್. ಸಾಯಿಬಾಬಾ ಅವರನ್ನು ಸುಮಾರು ದಶಕಗಳ ದೀರ್ಘ ಕಾಲ ವಶದಲ್ಲಿ ಇರಿಸಿರುವ ಕುರಿತು ಪ್ರಶ್ನಿಸಿದ್ದಾರೆ.
‘‘ಭಾರತವು ಮಾನವ ಹಕ್ಕುಗಳ ಹೋರಾಟಗಾರರಾದ ಜಿ.ಎನ್. ಸಾಯಿಬಾಬಾ ಅವರನ್ನು ಬಂಧನದಲ್ಲಿ ಇರಿಸಿರುವುದು ಅಮಾನವಿಯ ಹಾಗೂ ಅರ್ಥಹೀನ ಕೃತ್ಯ’’ ಎಂದು ತಜ್ಞರ ಹೇಳಿಕೆ ತಿಳಿಸಿದೆ.
‘‘ಅವರ ನಿರಂತರ ಬಂಧನ ಅವಮಾನಕರ. ಇದು ವಿಮರ್ಶಾತ್ಮಕ ಟೀಕೆಯ ಧ್ವನಿಗಳನ್ನು ಮೌನಗೊಳಿಸುವ ಹಾಲ್‌ಮಾರ್ಕ್‌ಗಳಾಗಿ ಕಂಡು ಬರುತ್ತವೆ’’ ಎಂದು ಅವರು ಹೇಳಿದ್ದಾರೆ.
ಎರಡು ಬಾರಿ ಅಲ್ಪಾವಧಿ ಜಾಮೀನಿನಲ್ಲಿದ್ದುದು ಹೊರತುಪಡಿಸಿದರೆ ಬಂಧನವಾದಂದಿನಿಂದ ಸಾಯಿಬಾಬಾ ಅವರನ್ನು ನಾಗಪುರದ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು. ಕಾರಾಗೃಹದಲ್ಲಿ ಅವರ ಆರೋಗ್ಯ ಪರಿಸ್ಥಿತಿ ತೀವ್ರ ಕಳವಳಕಾರಿಯಾಗಿದೆ ಎಂದು ಅವರು ಹೇಳಿದ್ದಾರೆ.
ಸಾಯಿಬಾಬಾ ಅವರನ್ನು ಅತ್ಯುಚ್ಛ ಭದ್ರತೆಯ ‘ಅಂಡಾ ಬ್ಯಾರಕ್’ನಲ್ಲಿ ಬಂಧನದಲ್ಲಿ ಇರಿಸಲಾಗಿದೆ. ಸಾಯಿಬಾಬಾ ಅವರು ಗಾಲಿ ಖುರ್ಚಿ ಬಳಸಲು ‘ಅಂಡಾ ಬ್ಯಾರಕ್’ ಸೂಕ್ತವಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ತಾನು ಭಾರತ ಸರಕಾರವನ್ನು ಸಂಪರ್ಕಿಸಿದ್ದೇನೆ. ಕೈದಿಗಳ ಆರೋಗ್ಯ ಹಾಗೂ ಗೌರವವನ್ನು ಎತ್ತಿ ಹಿಡಿಯುವ ಬಾಧ್ಯತೆಯನ್ನು ಭಾರತಕ್ಕೆ ಒತ್ತಿ ಹೇಳಿದ್ದೇನೆ ಎಂದು ಅವರು ಹೇಳಿದ್ದಾರೆ.
ಸಾಯಿಬಾಬಾ ಅವರು ದಿಲ್ಲಿ ವಿಶ್ವವಿದ್ಯಾನಿಲಯದ ಮಾಜಿ ಇಂಗ್ಲೀಷ್ ಪ್ರಾಧ್ಯಾಪಕ. ಬಾಲಕನಾಗಿದ್ದಾಗ ಪೋಲಿಯೊ ದಾಳಿ ಹಾಗೂ ಬೆನ್ನು ಹುರಿಯ ಅಸ್ವಸ್ಥತೆಯಿಂದ ಅವರು ಗಾಲಿ ಖುರ್ಚಿಯಲ್ಲೇ ಸಂಚರಿಸುತ್ತಿದ್ದಾರೆ. ಸಾಯಿ ಬಾಬಾ ಅವರನ್ನು ವಿವಿಧ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿ ಯುಎಪಿಎ ಕಾಯ್ದೆ ಅಡಿ 2014ರಲ್ಲಿ ಬಂಧಿಸಲಾಗಿತ್ತು.