ನೈಟ್ರೋಜನ್ ಅನಿಲ ಬಳಸಿ ಮರಣದಂಡನೆ ಶಿಕ್ಷೆ ಜಾರಿ : ಅಮೆರಿಕದಲ್ಲಿ ಪ್ರಥಮ ಪ್ರಕರಣ
ವಾಷಿಂಗ್ಟನ್: ದಕ್ಷಿಣ ಅಮೆರಿಕದ ಅಲಬಾಮ ರಾಜ್ಯದಲ್ಲಿ ಕೊಲೆ ಅಪರಾಧಿಗೆ ನೈಟ್ರೋಜನ್ ಅನಿಲ ಬಳಸಿ ಮರಣದಂಡನೆ ಶಿಕ್ಷೆ ವಿಧಿಸಲಾಗಿದ್ದು ಮಾನವಹಕ್ಕುಗಳ ಪ್ರತಿಪಾದಕರು ತೀವ್ರವಾಗಿ ವಿರೋಧಿಸುತ್ತಿರುವ ಈ ವಿವಾದಾತ್ಮಕ ಮರಣದಂಡನೆ ಶಿಕ್ಷೆ ವಿಧಾನವನ್ನು ಅಮೆರಿಕದಲ್ಲಿ ಇದೇ ಮೊದಲ ಬಾರಿಗೆ ಪ್ರಯೋಗಿಸಲಾಗಿದೆ.
1988ರಲ್ಲಿ ಪಾದ್ರಿಯ ಪತ್ನಿಯನ್ನು ಸುಪಾರಿ ಪಡೆದು ಹತ್ಯೆ ಮಾಡಿದ್ದ ಪ್ರಕರಣದಲ್ಲಿ 58 ವರ್ಷದ ಕೆನ್ನೆತ್ ಯೂಜಿನ್ ಸ್ಮಿತ್ ಅಪರಾಧಿಯೆಂದು ನ್ಯಾಯಾಲಯ ತೀರ್ಪು ನೀಡಿ ಮರಣದಂಡನೆ ಶಿಕ್ಷೆ ವಿಧಿಸಿತ್ತು. 2022ರ ನವೆಂಬರ್ ನಲ್ಲಿ ಮಾರಣಾಂತಿಕ ಚುಚ್ಚುಮದ್ದು ನೀಡಿ ಸ್ಮಿತ್‍ರನ್ನು ಹತ್ಯೆ ಮಾಡಲು ಆದೇಶಿಸಲಾಗಿತ್ತು. ಆದರೆ ಇಂಜೆಕ್ಷನ್ ನೀಡುವ ಮುನ್ನ ತೋಳಿನ ನರದೊಳಗೆ ಟ್ಯೂಬ್ ಅನ್ನು ಅಧಿಕಾರಿಗಳು ಹೊಂದಿಸಲು ವಿಫಲವಾದ್ದರಿಂದ ಈ ಪ್ರಯತ್ನ ವಿಫಲಗೊಂಡಿತ್ತು. ಈ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ್ದ ಸ್ಮಿತ್ `ಮರಣದಂಡನೆಯ ವಿಫಲ ಯತ್ನದ ಆಘಾತದಿಂದ ಇನ್ನೂ ಹೊರಬಂದಿಲ್ಲ. ಆದ್ದರಿಂದ ಮುಂದಿನ ಕ್ರಮದ ಬಗ್ಗೆ ತೀವ್ರ ಆತಂಕಗೊಂಡಿದ್ದೇನೆ' ಎಂದಿದ್ದರು.
ಅಲಬಾಮ ರಾಜ್ಯದ ಅಟ್ಮೋರ್‍ನಲ್ಲಿನ ಹೋಲ್ಮನ್ ಜೈಲಿನಲ್ಲಿ ಸ್ಮಿತ್‍ಗೆ ಗುರುವಾರ ರಾತ್ರಿ ಮರಣದಂಡನೆ ವಿಧಿಸಲಾಗಿದೆ. ನೈಟ್ರೋಜನ್ ಅನಿಲವನ್ನು ಅವರ ಮುಖವನ್ನು ಮುಚ್ಚಿದ್ದ ಮಾಸ್ಕ್ ನೊಳಗೆ ಹರಿಸಲಾಗಿದ್ದು ಅವರು ಉಸಿರುಗಟ್ಟಿ ಮೃತಪಟ್ಟರು. `35 ವರ್ಷಗಳ ಹಿಂದೆ ನಡೆಸಿದ್ದ ಹೇಯ ಕೃತ್ಯಕ್ಕಾಗಿ ಗುರುವಾರ ಸ್ಮಿತ್‍ಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ಕಡೆಗೂ ನ್ಯಾಯ ಒದಗಿಸಲಾಗಿದೆ' ಎಂದು ಅಲಬಾಮಾದ ಅಟಾರ್ನಿ ಜನರಲ್ ಸ್ಟೀವ್ ಮಾರ್ಷಲ್ ಘೋಷಿಸಿದ್ದಾರೆ.
ಸಾಕ್ಷಿಗಳ ಪ್ರಕಾರ, ಕೊನೆಯುಸಿರೆಳೆಯುವ ಮುನ್ನ ಸ್ಮಿತ್ 2ರಿಂದ 4 ನಿಮಿಷಗಳ ಕಾಲ ಕೈಕಾಲು ಬಡಿಯಲು ಆರಂಭಿಸಿದರು. ಬಳಿಕ ಸುಮಾರು 5 ನಿಮಿಷ ಏದುಸಿರು ಬಿಟ್ಟರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. `ಇದುವರೆಗೆ ಪರೀಕ್ಷೆ ನಡೆಸದ, ಸಾಬೀತುಪಡಿಸದ ಮರಣದಂಡನೆ ವಿಧಾನವನ್ನು ಬಳಸಲಾಗುತ್ತದೆ. ಇದನ್ನು ಇದುವರೆಗೆ ಅಮೆರಿಕದಲ್ಲಿ ಅಥವಾ ಜಗತ್ತಿನ ಯಾವುದೇ ಪ್ರದೇಶದಲ್ಲಿ ಇದುವರೆಗೆ ಬಳಸಿಲ್ಲ' ಎಂದು ಮರಣದಂಡನೆ ಮಾಹಿತಿ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ರಾಬಿನ್ ಮಾಹೆರ್ ಹೇಳಿದ್ದರು.
ಅಮೆರಿಕದಲ್ಲಿ ಕಡೆಯ ಬಾರಿಗೆ ವಿಷಾನಿಲ ಬಳಸಿ ಕೈದಿಗಳಿಗೆ ಮರಣದಂಡನೆಯನ್ನು 1999ರಲ್ಲಿ ವಿಧಿಸಲಾಗಿತ್ತು. ಆದರೆ ಆಗ ಹೈಡ್ರೋಜನ್ ಸೈನೈಡ್ ಅನಿಲ ಬಳಕೆಯಾಗಿತ್ತು.
ಅತ್ಯಂತ ಕ್ರೂರ ವಿಧಾನವಾದ ನೈಟ್ರೋಜನ್ ಅನಿಲ ಬಳಕೆಯನ್ನು ಇದುವರೆಗೆ ಅಮೆರಿಕದಲ್ಲಿ ಮನುಷ್ಯರಿಗೆ ಮರಣದಂಡನೆ ವಿಧಿಸಲು ಬಳಸಿಲ್ಲ. ದೊಡ್ಡ ಪ್ರಾಣಿಗಳ ಹತ್ಯೆಗೆ ಬಳಸಲಾಗುತ್ತಿದ್ದರೂ, ಮೊದಲು ಅರಿವಳಿಕೆ(ನಿದ್ರಾಜನಕ)ಯನ್ನು ನೀಡಲಾಗುತ್ತಿದೆ.
ವಿಶ್ವಸಂಸ್ಥೆ, ಇಯು ಖಂಡನೆ
ಮರಣದಂಡನೆ ಶಿಕ್ಷೆಗೆ ಗುರಿಯಾದ ಅಪರಾಧಿಯನ್ನು ನೈಟ್ರೋಜನ್ ಗ್ಯಾಸ್‍ನಿಂದ ಉಸಿರುಗಟ್ಟಿಸಿ ಹತ್ಯೆ ಮಾಡಿರುವುದು ಚಿತ್ರಹಿಂಸೆಗೆ ಸಮವಾಗುತ್ತದೆ ಎಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ ಮುಖ್ಯಸ್ಥ ವೋಕರ್ ಟರ್ಕ್ ಶುಕ್ರವಾರ ಖಂಡಿಸಿದ್ದಾರೆ. ಈ ಅಸಾಮಾನ್ಯ ಮತ್ತು ಪರೀಕ್ಷಿಸದ ವಿಧಾನವು ಚಿತ್ರಹಿಂಸೆ, ಕ್ರೂರ, ಅಮಾನವೀಯ ಮತ್ತು ಅವಮಾನಕರ ವಿಧಾನವಾಗಿದೆ ಎಂಬ ಆತಂಕದ ನಡುವೆಯೂ ಶಿಕ್ಷೆಯನ್ನು ಜಾರಿಗೊಳಿಸಿರುವುದು ವಿಷಾದನೀಯವಾಗಿದೆ' ಎಂದವರು ಪ್ರತಿಕ್ರಿಯಿಸಿದ್ದಾರೆ.
ಇದು ಅತ್ಯಂತ ಕ್ರೂರ ಮತ್ತು ಅಸಾಮಾನ್ಯ ಶಿಕ್ಷಾ ವಿಧಾನವಾಗಿದೆ ಎಂದು ಯುರೋಪಿಯನ್ ಯೂನಿಯನ್ ವಕ್ತಾರರು ಖಂಡಿಸಿದ್ದಾರೆ.
ಸ್ಮಿತ್‍ಗೆ ಮರಣದಂಡನೆ ಜಾರಿಗೊಳಿಸಲು ಈ ಕ್ರೂರ ವಿಧಾನ ಬಳಸದಂತೆ ಕಳೆದ ವಾರ ವಿಶ್ವಸಂಸ್ಥೆ ಮಾನವಹಕ್ಕುಗಳ ವಿಭಾಗದ ವಕ್ತಾರೆ ರವೀನಾ ಶಾಂದಾಸಾನಿ ಅಲಬಾಮಾ ರಾಜ್ಯದ ಅಧಿಕಾರಿಗಳನ್ನು ಆಗ್ರಹಿಸಿದ್ದರು.