ಭಾರತ, ಟರ್ಕಿಯಲ್ಲಿ ನಕಲಿ ಲಿವರ್ ಔಷಧಿ: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ
ನ್ಯೂಯಾರ್ಕ್: ಡೆಫಿಟೋಲಿಯೊ ಹೆಸರಿನಲ್ಲಿ ನಕಲಿ ಲಿವರ್ ಔಷಧಿ ಭಾರತ ಹಾಗೂ ಟರ್ಕಿಯಲ್ಲಿ ಮಾರಾಟವಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಎಚ್ಚರಿಕೆ ನೀಡಿದೆ.
ಡೆಫಿಟೆಲಿಯೊ (ಡೆಫಿಬ್ರೊಟೈಡ್ ಸೋಡಿಯಂ) ಔಷಧಿಯ ಒಂದು ಬ್ಯಾಚ್ ನಕಲಿಯಾಗಿದೆ ಎಂದು ಡಬ್ಲ್ಯುಎಚ್ಓ ವೈದ್ಯಕೀಯ ಉತ್ಪನ್ನ ಬಗೆಗಿನ ಎಚ್ಚರಿಕೆಯಲ್ಲಿ ಹೇಳಲಾಗಿದೆ. ಈ ನಕಲಿ ಔಷಧ ಭಾರತ (2023ರ ಏಪ್ರಿಲ್) ಹಾಗೂ ಟರ್ಕಿ (ಜುಲೈ 2023) ಯಲ್ಲಿ ಪತ್ತೆಯಾಗಿದ್ದು, ಇದನ್ನು ನಿಯಂತ್ರಿತ ಹಾಗೂ ಅಧಿಕೃತ ವಾಹಿನಿಯ ಹೊರಗೆ ಸರಬರಾಜು ಮಾಡಲಾಗಿದೆ" ಎಂದು ಸ್ಪಷ್ಟಪಡಿಸಿದೆ.
ವಿಓಡಿ (ವೆನೊ ಒಕ್ಲುಸಿವ್ ಡಿಸೀಸ್) ರೋಗಕ್ಕೆ ಹೆಮಿಟೊಪೊಯೆಟಿಕ್ ಅಂಗಾಂಶ ಕಸಿ (ಎಚ್ಎಸ್ಸಿಟಿ) ಚಿಕಿತ್ಸೆಗೆ ಈ ಔಷಧ ಬಳಸಲಾಗುತ್ತದೆ. ಇದನ್ನು ವಯಸ್ಕರು, ಪ್ರೌಢಾವಸ್ಥೆಯವರು, ಮಕ್ಕಳು ಮತ್ತು ಒಂದು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳ ಚಿಕಿತ್ಸೆಗೆ ಬಳಸಲಾಗುತ್ತದೆ. ವಿಓಡಿ ಎನ್ನುವುದು ಲಿವರ್ನ ರಕ್ತನಾಳಗಳಲ್ಲಿ ತಡೆ ಉಂಟಾಗುವ ಕಾಯಿಲೆಯಾಗಿದ್ದು, ಇದರಿಂದ ಈ ಅಂಗಾಂಗ ಸಮರ್ಪಕವಾಗಿ ಕಾರ್ಯನಿರ್ವಹಿಸುವುದಿಲ್ಲ.
ಡೆಫಿಟೆಲಿಯೊ ಔಷಧವನ್ನು ವಿಶ್ವಸಂಸ್ಥೆಯ ಈ ಅಂಗಸಂಸ್ಥೆ ಅಧಿಕೃತವಾಗಿ ಉತ್ಪಾದನೆ ಮಾಡುತ್ತದೆ. ಆದರೆ ಈ ಔಷಧಿಯ 20ಜಿ20ಎ ಲಾಟ್, ಜರ್ಮನ್/ಆಸ್ಟ್ರೇಲಿಯನ್ ಪ್ಯಾಕೇಜಿಂಗ್ ನಲ್ಲಿ ಪ್ಯಾಕ್ ಆಗಿತ್ತು. ಆದರೆ ಈ ನಕಲಿ ಉತ್ಪನ್ನ ಯುಕೆ/ ಐರ್ಲೆಂಡ್ ಪ್ಯಾಕೇಜಿಂಗ್ ಹೊಂದಿದೆ. ಇದರ ಅವಧಿ ಮೀರುವ ದಿನಾಂಕ ಕೂಡಾ ತಪ್ಪಾಗಿದ್ದು, ನೋಂದಾಯಿತ ಅವಧಿಯ ಕ್ರಮಕ್ಕೆ ಬದ್ಧವಾಗಿಲ್ಲ. ಮೇಲೆ ಹೇಳಲಾದ ಸೀರಿಯಲ್ ನಂಬರ್ ಗೂ 20ಜಿ20ಎಗೂ ಸಂಬಂಧ ಇಲ್ಲ. ಈ ಔಷಧಿಯನ್ನು ಭಾರತ ಹಾಗೂ ಟರ್ಕಿಯಲ್ಲಿ ಮಾರಾಟ ಮಾಡುವುದಕ್ಕೆ ಅನುಮತಿ ಇಲ್ಲ ಎಂದು ಸ್ಪಷ್ಟಪಡಿಸಿದೆ.