ಅಧ್ಯಕ್ಷನಾಗಿ ಮೊದಲ ಕೆಲಸ ಬೈಡನ್ ಆದೇಶ ರದ್ದುಗೊಳಿಸುವುದು: ಟ್ರಂಪ್

Update: 2025-01-20 21:03 IST
Photo of Donald Trump

ಡೊನಾಲ್ಡ್ ಟ್ರಂಪ್ | PC ; PTI  

  • whatsapp icon

 ವಾಷಿಂಗ್ಟನ್: ಅಮೆರಿಕದ 47ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸುವುದಕ್ಕೂ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಡೊನಾಲ್ಡ್ ಟ್ರಂಪ್ `ಬೈಡನ್ ಆಡಳಿತ ಹೊರಡಿಸಿದ ಡಜನ್‍ಗಟ್ಟಲೆ `ವಿನಾಶಕಾರಿ ಮತ್ತು ಮೂಲಭೂತವಾದಿ' ಆದೇಶಗಳನ್ನು ರದ್ದುಗೊಳಿಸುವುದು ಅಧ್ಯಕ್ಷರಾಗಿ ತನ್ನ ಮೊದಲ ಕೆಲಸವಾಗಿರುತ್ತದೆ ಎಂದಿದ್ದಾರೆ.

ವಾಷಿಂಗ್ಟನ್ ಡಿಸಿಯ ನ್ಯಾಷನಲ್ ಬಿಲ್ಡಿಂಗ್ ಮ್ಯೂಸಿಯಂನಲ್ಲಿ `ಕ್ಯಾಂಡಲ್‍ಲೈಟ್ ಡಿನ್ನರ್'(ಮೇಣದ ಬತ್ತಿಯ ಬೆಳಕಿನಲ್ಲಿ ಔತಣಕೂಟ)ನಲ್ಲಿ ಪಾಲ್ಗೊಂಡಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್ ` ನನ್ನ ಪೆನ್‍ನ ಒಂದು ಹೊಡೆತದಿಂದ (ಸಹಿ) ಬೈಡನ್ ಆಡಳಿತದ ಡಜನ್‍ಗಟ್ಟಲೆ ವಿನಾಶಕಾರಿ ಕಾರ್ಯನಿರ್ವಾಹಕ ಆದೇಶಗಳನ್ನು ರದ್ದುಪಡಿಸುತ್ತೇನೆ. ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಗಂಟೆಯೊಳಗೇ ಸುಮಾರು 100 ಕಾರ್ಯನಿರ್ವಾಹಕ ಆದೇಶಗಳಿಗೆ ಸಹಿ ಹಾಕುತ್ತೇನೆ. ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸುವಲ್ಲಿ ಒಂದು ಕ್ಷಣವನ್ನೂ ವ್ಯರ್ಥ ಮಾಡಲು ನಮ್ಮ ಆಡಳಿತ ಬಯಸುವುದಿಲ್ಲ. ವಲಸೆ, ಹಣದುಬ್ಬರ ಮತ್ತು ಗಡಿಭದ್ರತೆ ಸೇರಿದಂತೆ ದೇಶದ ಸವಾಲುಗಳನ್ನು ನಿಭಾಯಿಸಲು ಆಡಳಿತವು ತ್ವರಿತವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಒತ್ತಿಹೇಳಿರುವುದಾಗಿ ಎಎನ್‍ಐ ವರದಿ ಮಾಡಿದೆ.

ಹೊಸ ಆಡಳಿತವು `ನೀಡಿರುವ ಭರವಸೆಗಳನ್ನು ನಿರ್ವಹಿಸುವ' ಧ್ಯೇಯದೊಂದಿಗೆ ಕಾರ್ಯನಿರ್ವಹಿಸಲಿದೆ. ಅಧ್ಯಕ್ಷನಾಗಿ ತನ್ನ ಎರಡನೇ ಅವಧಿಯು ಮೊದಲ ಅವಧಿಯ ಯಶಸ್ಸನ್ನೂ ಮೀರಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ನಮ್ಮ ಗಡಿಗಳ ಆಕ್ರಮಣವು ಕಡಿಮೆಗೊಳ್ಳುತ್ತದೆ ಮತ್ತು ನಮ್ಮ ಸಾರ್ವಭೌಮತ್ವದ ಮರುಸ್ಥಾಪನೆ ಪ್ರಾರಂಭವಾಗುತ್ತದೆ. ಪ್ರಪಂಚದಾದ್ಯಂತದ ದೇಶಗಳಿಂದ ನಮ್ಮ ದೇಶಕ್ಕೆ ಅಪರಾಧಿಗಳು ಹರಿದುಬರುತ್ತಿರುವುದನ್ನು ತಕ್ಷಣವೇ ನಿಲ್ಲಿಸುತ್ತೇವೆ. ಹಣದುಬ್ಬರ ಬಿಕ್ಕಟ್ಟನ್ನು ಸೋಲಿಸುತ್ತೇವೆ ಎಂದು ಟ್ರಂಪ್ ಘೋಷಿಸಿದ್ದಾರೆ.

ಅಮೆರಿಕ ಅಧ್ಯಕ್ಷರಾಗಿದ್ದ ಜಾನ್ ಎಫ್.ಕೆನಡಿ, ಅವರ ಸಹೋದರ ರಾಬರ್ಟ್ ಕೆನಡಿ, ನಾಗರಿಕ ಹಕ್ಕುಗಳ ಪ್ರತಿಪಾದಕ ಮಾರ್ಟಿನ್ ಲೂಥರ್ ಕಿಂಗ್ (ಜ್ಯೂನಿಯರ್) ಸೇರಿದಂತೆ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಸಾರ್ವಜನಿಕರಿಗೆ ಲಭ್ಯಗೊಳಿಸುವುದಾಗಿ ಟ್ರಂಪ್ ಹೇಳಿದ್ದಾರೆ.

ಇದಕ್ಕೂ ಮುನ್ನ, ಚುನಾಯಿತ ಅಧ್ಯಕ್ಷರಾಗಿ ತಮ್ಮ ಕೊನೆಯ ಸಾರ್ವಜನಿಕ ಕಾರ್ಯಕ್ರಮವಾಗಿ ವಾಷಿಂಗ್ಟನ್‍ನ ಕ್ಯಾಪಿಟಲ್ ವನ್ ಅರೆನಾದಲ್ಲಿ `ಅಮೆರಿಕ ಗ್ರೇಟ್ ಅಗೈನ್' ರ್ಯಾಲಿಯಲ್ಲಿ ಪಾಲ್ಗೊಂಡ ಟ್ರಂಪ್ , ವೇದಿಕೆಯಲ್ಲಿ ಗಾಯಕರ ಜತೆ `ವೈಎಂಸಿಎ' ಹಾಡಿಗೆ ಹೆಜ್ಜೆಹಾಕಿ ಗಮನ ಸೆಳೆದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News