ಥೈಲ್ಯಾಂಡ್‍ನಲ್ಲಿ ಪ್ರವಾಹ, ಭೂಕುಸಿತ : ಕನಿಷ್ಠ ಇಬ್ಬರು ಮೃತ್ಯು
ಬ್ಯಾಂಕಾಕ್ : ಯಾಗಿ ಚಂಡಮಾರುತದ ಪ್ರಭಾವದಿಂದ ಥೈಲ್ಯಾಂಡ್‍ನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಉತ್ತರದ ಎರಡು ಪ್ರಾಂತಗಳಲ್ಲಿ ಪ್ರವಾಹ, ಭೂಕುಸಿತದಿಂದ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದು ಜಲಾವೃತಗೊಂಡಿರುವ ಪ್ರದೇಶದಲ್ಲಿ ಸಿಕ್ಕಿಬಿದ್ದಿರುವ ನೂರಾರು ಮಂದಿಯನ್ನು ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ಬುಧವಾರ ಹೇಳಿದ್ದಾರೆ.
ಮಂಗಳವಾರ ಬೆಳಿಗ್ಗೆಯಿಂದ ಧಾರಾಕಾರ ಮಳೆಯಾಗುತ್ತಿರುವುದರಿಂದ ನದಿಗಳ ನೀರು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದ್ದು ಹಲವು ಜನವಸತಿ ಪ್ರದೇಶಗಳು ಜಲಾವೃತಗೊಂಡಿವೆ. ಹಲವೆಡೆ ಭೂಕುಸಿತ ಸಂಭವಿಸಿದೆ. ನೆರೆ ನೀರಿನ ರಭಸ ತೀವ್ರಗೊಂಡಿರುವುದರಿಂದ ಶೋಧ ಮತ್ತು ರಕ್ಷಣೆ ಕಾರ್ಯಕ್ಕೆ ತೊಡಕಾಗಿದೆ. ಸುಮಾರು 9 ಸಾವಿರ ಮನೆಗಳು ಅಪಾಯದಲ್ಲಿವೆ ಎಂದು ಥೈಲ್ಯಾಂಡ್ ಪ್ರಧಾನಿ ಪೆಟೊಂಗ್ಟರ್ನ್ ಶಿನವತ್ರಾ ಹೇಳಿದ್ದಾರೆ.
ಚಿಯಾಂಗ್ ಮಾಯ್ ಪ್ರಾಂತದಲ್ಲಿ ದಿಢೀರ್ ಪ್ರವಾಹದಿಂದ ಭೂಕುಸಿತ ಸಂಭವಿಸಿದ್ದು ಇಬ್ಬರು ಸಾವನ್ನಪ್ಪಿದ್ದಾರೆ. ಮ್ಯಾನ್ಮಾರ್ ಗಡಿಭಾಗದಲ್ಲಿರುವ ಮಾಯ್‍ಸಾಯಿ ಜಿಲ್ಲೆಯಲ್ಲಿ ಪ್ರವಾಹ ಪೀಡಿತ ಪ್ರದೇಶದಲ್ಲಿ ನೂರಾರು ಮಂದಿ ಸಿಲುಕಿದ್ದು ಮಳೆ ಹಾಗೂ ಭೂಕುಸಿತ ಮುಂದುವರಿದಿರುವುದರಿಂದ ರಬ್ಬರ್ ದೋಣಿಗಳ ಮೂಲಕ ಅವರನ್ನು ರಕ್ಷಿಸುವ ಕಾರ್ಯಕ್ಕೆ ಹಿನ್ನಡೆಯಾಗಿದೆ.
ಹೆಲಿಕಾಪ್ಟರ್ ಮೂಲಕ ನೀರು ಮತ್ತು ಆಹಾರ ಒದಗಿಸುವ ಮತ್ತು ಸ್ಥಳಾಂತರಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ನರೋಂಗ್‍ಪಾಲ್ ಕಿಡಾನ್ ಹೇಳಿದ್ದಾರೆ.