ಅಮೆರಿಕ ಇತಿಹಾಸದಲ್ಲೇ ಮೊದಲ ಬಾರಿಗೆ ಸ್ಪೀಕರ್ ಪದಚ್ಯುತಿ

Update: 2023-10-04 03:33 GMT

Photo: twitter.com/TheRickyDavila

ವಾಷಿಂಗ್ಟನ್: ಅಮೆರಿಕದ ಇತಿಹಾಸದಲ್ಲೇ ಮೊದಲ ಬಾರಿಗೆ ಮಂಗಳವಾರ ಅಮೆರಿಕದ ಸ್ಪೀಕರ್ ಕೆವಿನ್ ಮೆಕಾರ್ಥಿ ಯವರನ್ನು ಪದಚ್ಯುತಗೊಳಿಸಲಾಗಿದೆ. ಕನ್ಸರ್ವೇಟಿವ್ ಪಕ್ಷದ ಬಿಗಿ ನಿಲುವಿನಿಂದಾಗಿ ಇಡೀ ಸದನ ಹಾಗೂ ರಿಪಬ್ಲಿಕನ್ ಪಕ್ಷದ ನಾಯಕತ್ವ ಅರಾಜಕ ಸ್ಥಿತಿ ಎದುರಿಸುವಂತಾಯಿತು.

ಯಾವುದೇ ಕಾರಣಕ್ಕೆ ತಮ್ಮ ಸ್ಥಾನವನ್ನು ತ್ಯಜಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದ ಕೆವಿನ್ ಮೆಕಾರ್ಥಿ ಯವರ ರಾಜಕೀಯ ಭವಿಷ್ಯ ಈ ಘಟನೆಯೊಂದಿಗೆ ಬಹುತೇಕ ಮುಕ್ತಾಯವಾಗಿದೆ. ಅವರ ಪದಚ್ಯುತಿಗೆ ತಂತ್ರ ಹೆಣೆದ ರಿಪಬ್ಲಿಕನ್ ಪಕ್ಷದ ಸದಸ್ಯರಾಗಲೀ, ಡೆಮಾಕ್ರಟಿಕ್ ಪಕ್ಷದ ಮುಖಂಡರಾಗಲೀ ಯಾವುದೇ ಸಂಧಾನಸೂತ್ರ ನಡೆಸಲಿಲ್ಲ.

ಸ್ಪೀಕರ್ ಹುದ್ದೆಯ ರೇಸ್ ನಲ್ಲಿ ತಾವು ಇಲ್ಲ ಎಂದು ಕೆವಿನ್ ಮೆಕಾರ್ಥಿ ಮಂಗಳವಾರ ಸಂಜೆ ಸ್ಪಷ್ಟಪಡಿಸಿದ್ದು, ರಿಪಬ್ಲಿಕನ್ ಪಕ್ಷದ ಬಹುಮತ ಇರುವ ಸದನದಲ್ಲಿ ಇವರ ಉತ್ತರಾಧಿಕಾರಿ ಯಾರು ಎನ್ನುವುದು ನಿರ್ಧಾರವಾಗದೇ ಇರುವುದರಿಂದ ಮುಂದಿನ ಹೆಜ್ಜೆ ಅನಿಶ್ಚಿತ ಎನಿಸಿದೆ.

ಮೆಕಾರ್ಥಿಯವರ ಪ್ರಮುಖ ಎದುರಾಳಿ ಮೆಟ್ ಗಾಟೆಝ್ ಈ ತೆರವು ನಿಲುವಳಿಯನ್ನು ಮಂಡಿಸಿದ್ದು, ತ್ವರಿತವಾಗಿ ಈ ನಾಟಕೀಯ ಬೆಳವಣಿಗೆಗೆ ಸೂತ್ರಧಾರರಾದರು. ಮೆಕಾರ್ಥಿ ಬಹುತೇಕ ರಿಪಬ್ಲಿಕನ್ನರ ಬೆಂಬಲ ಹೊಂದಿದ್ದರೂ, ಇವರು ಕಳೆದ ಜನವರಿಯಲ್ಲಿ ಸ್ಪೀಕರ್ ಆಗಲು ವಿರೋಧ ವ್ಯಕ್ತಪಡಿಸಿದ್ದ ಎಂಟು ಮಂದಿ, ಇವರ ಪದಚ್ಯುತಿಗೆ ನೆರವಾದರು.

ಮತದಾನ ಪ್ರಕ್ರಿಯೆ ಮುಗಿದು ಫಲಿತಾಂಶವನ್ನು 216-210 ಎಂದು ಸ್ಪೀಕರ್ ಕಚೇರಿ ಪ್ರಕಟಿಸಿದಾಗ ಇಡೀ ಸದನ ನಿಬ್ಬೆರಗಾಯಿತು. ಇದಾದ ಕೆಲವೇ ಕ್ಷಣಗಳ ಬಳಿಕ ಮೆಕಾರ್ಥಿಯವರ ಸಹವರ್ತಿ ಪ್ಯಾಟ್ರಿಕ್ ಮೆಕ್ಹೆನ್ರಿ ಅವರನ್ನು ಸದನದ ನಿಯಮದಂತೆ ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡಿ, ಮುಂದಿನ ಸ್ಪೀಕರ್ ಆಯ್ಕೆಯಾಗುವವರೆಗೂ ಸದನ ನಿಭಾಯಿಸುವ ಹೊಣೆ ವಹಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News