ಹಿಟ್ಲರ್ ಜನ್ಮದಿನಾಚರಣೆ ಮಾಡಿದ 4 ಜರ್ಮನ್ ಪ್ರಜೆಗಳ ಬಂಧನ

Update: 2024-04-22 16:23 GMT

ಸಾಂದರ್ಭಿಕ ಚಿತ್ರ

ವಿಯೆನ್ನಾ: ಪಶ್ಚಿಮ ಆಸ್ಟ್ರಿಯಾದಲ್ಲಿ ನಾಝಿ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಜನ್ಮದಿನದಂದು ಹಿಟ್ಲರ್ ಜನಿಸಿದ ಮನೆಯಲ್ಲಿ ಸ್ಮರಣೆಗಾಗಿ ಬಿಳಿಗುಲಾಬಿ ಇರಿಸಿ ಬಳಿಕ `ಹಿಟ್ಲರ್ ಸೆಲ್ಯೂಟ್' ನೀಡಿದ ನಾಲ್ವರು ಜರ್ಮನ್ ಪ್ರಜೆಗಳನ್ನು ಬಂಧಿಸಿರುವುದಾಗಿ ಆಸ್ಟ್ರಿಯಾದ ಪೊಲೀಸರು ಸೋಮವಾರ ಹೇಳಿದ್ದಾರೆ.

1889ರ ಎಪ್ರಿಲ್ 20ರಂದು ಪಶ್ಚಿಮ ಆಸ್ಟ್ರಿಯಾದ ಬ್ರೌನೌ ಆಮ್‍ಇನ್‍ನಲ್ಲಿ ಹಿಟ್ಲರ್ ಜನಿಸಿದ್ದ ಮನೆಯನ್ನು ಪೊಲೀಸ್ ಠಾಣೆಯನ್ನಾಗಿ ಪರಿವರ್ತಿಸುವ ಯೋಜನೆಗೆ ಕಳೆದ ವರ್ಷ ಚಾಲನೆ ದೊರಕಿದೆ. ಹಿಟ್ಲರ್ ನನ್ನು ವೈಭವೀಕರಿಸುವ ಜನರು ಹಿಟ್ಲರ್ ಜನಿಸಿದ್ದ ಮನೆಯನ್ನು ಯಾತ್ರಾ ಸ್ಥಳವನ್ನಾಗಿ ಮಾಡುವ ಪ್ರಯತ್ನವನ್ನು ತಡೆಯುವ ಉದ್ದೇಶದಿಂದ ಇದನ್ನು ಪೊಲೀಸ್ ಠಾಣೆಯನ್ನಾಗಿ ಪರಿವರ್ತಿಸಲು ಸರಕಾರ ಉದ್ದೇಶಿಸಿದೆ.

ಇಬ್ಬರು ಸಹೋದರಿಯರು ಹಾಗೂ ಅವರ ಪೋಷಕರು ಶನಿವಾರ(ಎಪ್ರಿಲ್ 20) ಹಿಟ್ಲರ್ ಜನಿಸಿದ್ದ ಮನೆಗೆ ತೆರಳಿ ಮನೆಯ ಕಿಟಕಿಯ ಬಳಿ ಬಿಳಿ ಗುಲಾಬಿಯನ್ನು ಇರಿಸಿದ್ದಾರೆ. ಬಳಿಕ ಮನೆಯೆದುರು ನಿಂತು ಫೋಟೋ ತೆಗೆಸಿಕೊಳ್ಳುವಾಗ ಒಬ್ಬ ಯುವತಿ ಹಿಟ್ಲರ್ ಗೆ ಸಶಸ್ತ್ರ ಪಡೆ ಸಲ್ಲಿಸುತ್ತಿದ್ದ `ಸೆಲ್ಯೂಟ್' ಗೌರವವನ್ನು ಸಲ್ಲಿಸಿದ್ದಾರೆ. ಆ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರು ಮಹಿಳೆಯರನ್ನು ಪ್ರಶ್ನಿಸಿದಾಗ `ಇದನ್ನು ತಮಾಷೆಗೆ ಮಾಡಿರುವುದಾಗಿ' ಹೇಳಿದ್ದಾರೆ. ಆದರೆ ಅವರ ಮೊಬೈಲ್ ಫೋನನ್ನು ಪರಿಶೀಲಿಸಿದಾಗ ನಾಝಿ ವಿಷಯದ ಸಂದೇಶಗಳು ಮತ್ತು ಫೋಟೋಗಳನ್ನು ವಿನಿಮಯ ಮಾಡಿಕೊಂಡಿರುವುದು ದೃಢಪಟ್ಟಿದೆ. ನಾಝಿ ಸಿದ್ಧಾಂತದ ಚಿಹ್ನೆಯನ್ನು ನಿಷೇಧಿಸುವ ಕಾನೂನನ್ನು ಉಲ್ಲಂಘಿಸಿರುವ 4 ಆರೋಪಿಗಳನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸುವುದಾಗಿ ಪೊಲೀಸರು ಹೇಳಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News