ನೈಜರ್‌ನಿಂದ ಸೇನೆ ಹಿಂಪಡೆಯಲು ಫ್ರಾನ್ಸ್ ಅಧ್ಯಕ್ಷರ ನಕಾರ
ಪ್ಯಾರಿಸ್: ಪಶ್ಚಿಮ ಆಫ್ರಿಕಾದ ದೇಶವಾದ ನೈಜರ್ನಲ್ಲಿ ಇರುವ ತನ್ನ ಸೇನಾಪಡೆಯ ತುಕಡಿಯನ್ನು ಯಾವುದೇ ಕಾರಣಕ್ಕೂ ಹಿಂದೆ ಕರೆಸಿಕೊಳ್ಳುವುದಿಲ್ಲ ಎಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ಸ್ಪಷ್ಟಪಡಿಸಿದ್ದಾರೆ.
ಜುಲೈ 26ರಂದು ನೈಜರ್ನಲ್ಲಿ ಕ್ಷಿಪ್ರದಂಗೆಯ ಮೂಲಕ ಅಧ್ಯಕ್ಷರನ್ನು ಪದಚ್ಯುತಿಗೊಳಿಸಿದ್ದ ಸೇನೆ ಅಧಿಕಾರವನ್ನು ವಶಕ್ಕೆ ಪಡೆದಿತ್ತು. ಸೇನೆಯ ಈ ಕ್ರಮವನ್ನು ಖಂಡಿಸಿದ್ದ ಫ್ರಾನ್ಸ್, ಗೃಹಬಂಧನದಲ್ಲಿರುವ ಅಧ್ಯಕ್ಷ ಬಝೌಮ್ಗೆ ಬೆಂಬಲ ಘೋಷಿಸಿತ್ತು. ನೈಜರ್ ಈ ಹಿಂದೆ ಫ್ರಾನ್ಸ್ನ ವಸಾಹತು ಪ್ರದೇಶವಾಗಿತ್ತು. ಉಭಯ ದೇಶಗಳ ನಡುವಿನ ಒಪ್ಪಂದದಂತೆ ನೈಜರ್ನಲ್ಲಿ ಫ್ರಾನ್ಸ್ನ ಸುಮಾರು 1,500 ಯೋಧರಿದ್ದಾರೆ.
ಆದರೆ, ನೈಜರ್ನಲ್ಲಿ ಸೇನೆ ಅಧಿಕಾರ ವಶಕ್ಕೆ ಪಡೆದ ಬಳಿಕ ದೇಶದಲ್ಲಿ ಪ್ರಜಾಪ್ರಭುತ್ವ ಮರುಸ್ಥಾಪನೆಗೆ ಪಶ್ಚಿಮ ಆಫ್ರಿಕನ್ ಆರ್ಥಿಕ ಸಂಘಟನೆ ನಡೆಸುತ್ತಿರುವ ಪ್ರಯತ್ನಕ್ಕೆ ಫ್ರಾನ್ಸ್ ಬೆಂಬಲ ಸೂಚಿಸಿತ್ತು. ಇದರಿಂದ ಅಸಮಾಧಾನಗೊಂಡಿರುವ ಸೇನಾಡಳಿತ ಸೆಪ್ಟಂಬರ್ 3ರ ಒಳಗೆ ನೈಜರ್ನಿಂದ ಸೇನಾತುಕಡಿಯನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಫ್ರಾನ್ಸ್ಗೆ ಗಡುವು ವಿಧಿಸಿತ್ತು. `ಸೇನೆ ಹಿಂದಕ್ಕೆ ಕರೆಸಿಕೊಳ್ಳುವ ಬಗ್ಗೆ ಫ್ರಾನ್ಸ್ ಯಾವುದೇ ಕ್ರಮ ಕೈಗೊಂಡಿಲ್ಲ' ಎಂದು ಸೇನಾಡಳಿತದ ವಕ್ತಾರ ರವಿವಾರ ಹೇಳಿಕೆ ನೀಡಿದ್ದರು.
ಇದಕ್ಕೆ ಸೋಮವಾರ ಪ್ರತಿಕ್ರಿಯಿಸಿರುವ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ `ಅರಾಜಕತಾವಾದಿಗಳ ಘೋಷಣೆ ಅಥವಾ ಹೇಳಿಕೆಯನ್ನು ನಾವು ಮಾನ್ಯ ಮಾಡುವುದಿಲ್ಲ. ಸೇನೆ ನಿಯೋಜನೆ ಅಥವಾ ವಾಪಾಸು ಪಡೆಯುವ ಬಗ್ಗೆ ನೈಜರ್ನ ಅಧ್ಯಕ್ಷ ಬಝೌಮ್ ನೀಡುವ ಹೇಳಿಕೆಯನ್ನು ಮಾತ್ರ ಪರಿಗಣಿಸುತ್ತೇವೆ' ಎಂದಿದ್ದಾರೆ.