ರೂಸ್ ವೆಲ್ಟ್ ನಿಂದ ಟ್ರಂಪ್ ವರೆಗೆ: ಹತ್ಯೆ ಯತ್ನದಲ್ಲಿ ಬದುಕುಳಿದವರು...
ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತ್ಯೆ ಯತ್ನ ಶುಕ್ರವಾರ ವಿಫಲವಾದ ಬೆನ್ನಲ್ಲೇ, ಅಮೆರಿಕದಲ್ಲಿ ಅನುಕಂಪದ ಅಲೆ ಸೃಷ್ಟಿಯಾಗಿದ್ದು, ಹತ್ಯೆ ಯತ್ನದಲ್ಲಿ ಉಳಿದುಕೊಂಡಿರುವ ಟ್ರಂಪ್ ಶ್ವೇತಭವನದ ಅಧಿಕಾರವನ್ನು ಮುಂದಿನ ಚುನಾವಣೆಯಲ್ಲಿ ಮರಳಿ ಪಡೆಯಲಿದ್ದಾರೆ ಎಂಬ ವಿಶ್ಲೇಷಣೆಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ಖ್ಯಾತ ರಾಜಕೀಯ ವಿಶ್ಲೇಷಕ, ಡಗ್ಲಾಸ್ ಬ್ರಿಂಕ್ಲೆ ಅವರು ಟ್ರಂಪ್ ಗೆಲುವಿನ ಭವಿಷ್ಯ ನುಡಿದಿದ್ದಾರೆ. "ತೀರಾ ಒತ್ತಡದ ಪರಿಸ್ಥಿತಿಯಲ್ಲಿ ಟ್ರಂಪ್ ತೋರಿದ ಸ್ಥೈರ್ಯ ಮತ್ತು ಸಾಹಸ ಹಾಗೂ ಬಿಗಿದ ಮುಷ್ಟಿ ಮೇಲಕ್ಕೆ ಎತ್ತಿ ಹಿಡಿದಿರುವುದು ಹೊಸ ಸಂಕೇತವಾಗಲಿದೆ" ಎಂದು ಅವರು ಅಂದಾಜಿಸಿದ್ದಾರೆ.
"ಹತ್ಯೆ ಯತ್ನದಲ್ಲಿ ಉಳಿದುಕೊಳ್ಳುವ ಮೂಲಕ ನೀವು ಹುತಾತ್ಮರಾಗಿದ್ದೀರಿ. ಏಕೆಂದರೆ ನೀವು ಸಾರ್ವಜನಿಕರ ಅನುಕಂಪಕ್ಕೆ ಪಾತ್ರರಾಗಿದ್ದೀರಿ" ಎಂದು ವಾಷಿಂಗ್ಟನ್ ಪೋಸ್ಟ್ ಜತೆ ಮಾತನಾಡಿದ ಅವರು ಹೇಳಿದ್ದಾರೆ. ಶನಿವಾರದ ದಾಳಿ ಬಳಿಕ ಹುತಾತ್ಮ ಹಾಗೂ ಸಂತ್ರಸ್ತರಾಗಿ ಟ್ರಂಪ್ ಅವರ ಅಧಿಕಾರಕ್ಕೆ ಮರಳುವ ಕೆಚ್ಚು ಹೆಚ್ಚಲಿದೆ" ಎಂದು ಬಣ್ಣಿಸಿದ್ದಾರೆ. ದಾಳಿ ಘಟನೆ ಬಳಿಕ ಹಲವು ಕಡೆಗಳಿಂದ ಟ್ರಂಪ್ ಪರ ಬೆಂಬಲ ವ್ಯಕ್ತವಾಗುತ್ತಿದೆ.
ಅಧ್ಯಕ್ಷ ಸ್ಥಾನಕ್ಕೆ ಮರಳುವ ಪ್ರಯತ್ನದಲ್ಲಿದ್ದ ರೂಸ್ ವೆಲ್ಟ್ ಕೂಡಾ 1912ರ ಹತ್ಯೆ ಪ್ರಯತ್ನದಲ್ಲಿ ಟ್ರಂಪ್ ಅವರಂತೆ ಉಳಿದುಕೊಂಡಿದ್ದರು. ಮಿಲ್ವೌಕಿಯಲ್ಲಿ ಪ್ರಚಾರ ಸಭೆಯಲ್ಲಿದ್ದಾಗ ಅವರ ಎದೆಗೆ ಗುಂಡು ತಗುಲಿತ್ತು. ಈ ಕೆಚ್ಚೆದೆಯವನನ್ನು ಸಾಯಿಸಲು ಗುಂಡು ಸಾಲದು ಎಂದು ರೂಸ್ ವೆಲ್ಟ್ ಹೇಳುತ್ತಾ ಬಂದಿದ್ದರು. ಆದರೆ 1912ರ ಚುನಾವಣೆಯಲ್ಲಿ ರೂಸ್ ವೆಲ್ಟ್ ಸೋಲು ಅನುಭವಿಸಿದರು. ಜನಾಂಗೀಯ ಹಾಗೂ ಪ್ರತ್ಯೇಕತಾವಾದಿ ಜಾರ್ಜ್ ವ್ಯಾಲಸ್ ಕೂಡಾ ಹತ್ಯೆ ಯತ್ನದಲ್ಲಿ ಉಳಿದುಕೊಂಡರೂ, ಚುನಾವಣೆಯಲ್ಲಿ ಸೋಲು ಕಾಣಬೇಕಾಯಿತು. ಜೆರಾಲ್ಡ್ ಫೋರ್ಡ್ ಎರಡು ಬಾರಿ ಹತ್ಯೆ ಯತ್ನದಲ್ಲಿ ಉಳಿದುಕೊಂಡರೂ ಚುನಾವಣೆಯಲ್ಲಿ ಸೋತರು.