ಗಾಝಾದಲ್ಲಿ ದಾಳಿ ತೀವ್ರಗೊಳಿಸಿದ ಇಸ್ರೇಲ್: ಸಂವಹನ ವ್ಯವಸ್ಥೆ ಕಡಿತ

Update: 2023-10-28 16:51 GMT

Photo: PTI 

ಟೆಲ್ಅವೀವ್: ಗಾಝಾ ಪಟ್ಟಿಯನ್ನು ಗುರಿಯಾಗಿಸಿ ವೈಮಾನಿಕ ಮತ್ತು ನೆಲದ ಮೇಲಿನ ದಾಳಿಯನ್ನು ಇಸ್ರೇಲ್ ತೀವ್ರಗೊಳಿಸಿದ್ದು ಶುಕ್ರವಾರ ರಾತ್ರಿ ನಡೆಸಿದ ಭೀಕರ ಬಾಂಬ್ದಾಳಿಯ ಬಳಿಕ ಗಾಝಾ ಪ್ರದೇಶದ ಸಂವಹನ ವ್ಯವಸ್ಥೆ ಕಡಿತಗೊಂಡಿದೆ ಎಂದು ವರದಿಯಾಗಿದೆ.

ಈ ಮಧ್ಯೆ, ಗಾಝಾ ಪ್ರದೇಶದಲ್ಲಿ ನೆಲದ ಮೇಲಿನ ಕಾರ್ಯಾಚರಣೆಯನ್ನು ವಿಸ್ತರಿಸುವುದಾಗಿ ಇಸ್ರೇಲ್ ಸೇನೆ ಹೇಳಿರುವುದು ಗಾಝಾದ ಮೇಲೆ ಸಂಪೂರ್ಣ ಆಕ್ರಮಣಕ್ಕೆ ಇಸ್ರೇಲ್ ಸಿದ್ಧವಾಗುತ್ತಿರುವ ಸೂಚನೆಯಾಗಿದೆ ಎಂದು ವಿಶ್ಲೇಷಿಸಲಾಗಿದೆ. ಬಾಂಬ್ ದಾಳಿಯಿಂದ ಇಂಟರ್ನೆಟ್, ಮೊಬೈಲ್ ಫೋನ್ ಮತ್ತು ಸ್ಥಿರ ದೂರವಾಣಿ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ ಎಂದು ಈ ಪ್ರದೇಶದಲ್ಲಿ ದೂರಸಂಪರ್ಕ ವ್ಯವಸ್ಥೆ ಒದಗಿಸುವ ‘ಪಾಲ್ಟೆಲ್’ ಹೇಳಿದೆ. ಆದರೆ ಕೆಲವು ಸ್ಯಾಟಿಲೈಟ್ ಫೋನ್ಗಳು ಕಾರ್ಯನಿರ್ವಹಣೆ ಮುಂದುವರಿಸಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇಸ್ರೇಲ್-ಹಮಾಸ್ ಸಂಘರ್ಷಕ್ಕೆ ಸಂಬಂಧಿಸಿದ ಮಹತ್ವದ ಬೆಳವಣಿಗೆಗಳು:

* ನಿರೀಕ್ಷಿತ ನೆಲದ ಮೇಲಿನ ಆಕ್ರಮಣಕ್ಕೆ ಪೂರ್ವಭಾವಿಯಾಗಿ ಇಸ್ರೇಲ್ ಗಡಿಯಲ್ಲಿ ಸಾವಿರಾರು ಯೋಧರನ್ನು ಸಜ್ಜುಗೊಳಿಸಿದೆ.

* ಗಾಝಾದಲ್ಲಿ ಸಾವಿನ ಸಂಖ್ಯೆ 7,300ನ್ನು ದಾಟಿದ್ದು ಇದರಲ್ಲಿ 60%ಕ್ಕೂ ಹೆಚ್ಚು ಮಕ್ಕಳು ಹಾಗೂ ಮಹಿಳೆಯರು ಎಂದು ಗಾಝಾದ ಆರೋಗ್ಯ ಇಲಾಖೆ ಹೇಳಿದೆ.

* ಹಮಾಸ್ ದಾಳಿಯಲ್ಲಿ ಇಸ್ರೇಲ್ ನಲ್ಲಿ 1,400ಕ್ಕೂ ಅಧಿಕ ಮಂದಿ ಮೃತಪಟ್ಟಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

* ಗಾಝಾ ಪಟ್ಟಿಯು ಈಗ ‘ಯುದ್ಧಭೂಮಿ’ ಎಂದು ಅಲ್ಲಿನ ನಿವಾಸಿಗಳಿಗೆ ಇಸ್ರೇಲ್ ಸೇನೆ ಎಚ್ಚರಿಸಿದೆ.

* ಇಸ್ರೇಲ್ ಆಕ್ರಮಣಕಾರ. ಹಮಾಸ್ ಭಯೋತ್ಪಾದಕನಲ್ಲ ಎಂದು ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೋಗನ್ ಪುನರುಚ್ಚರಿಸಿದ್ದಾರೆ.

* ಗಾಝಾದ ಮೇಲಿನ ಇಸ್ರೇಲ್ ಬಾಂಬ್ ದಾಳಿ ಅಂತರಾಷ್ಟ್ರೀಯ ಕಾನೂನಿಗೆ ವಿರುದ್ಧವಾಗಿದೆ ಮತ್ತು ದಶಕಗಳ ಕಾಲ ಉಳಿಯಬಹುದಾದ ದುರಂತವನ್ನು ಸೃಷ್ಟಿಸುವ ಅಪಾಯವಿದೆ ಎಂದು ರಶ್ಯದ ವಿದೇಶಾಂಗ ಸಚಿವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News