ಗಾಝಾದ 14 ಮಕ್ಕಳು ಚಿಕಿತ್ಸೆಗಾಗಿ ಇಟಲಿಗೆ ಸ್ಥಳಾಂತರ

Update: 2025-02-14 21:02 IST
ಗಾಝಾದ 14 ಮಕ್ಕಳು ಚಿಕಿತ್ಸೆಗಾಗಿ ಇಟಲಿಗೆ ಸ್ಥಳಾಂತರ

Photo Credit : ANSA

  • whatsapp icon

ರೋಮ್ : ಕ್ಯಾನ್ಸರ್‍ನಿಂದ ಬಳಲುತ್ತಿರುವವರು ಸೇರಿದಂತೆ 14 ಫೆಲೆಸ್ತೀನ್ ಮಕ್ಕಳನ್ನು ವೈದ್ಯಕೀಯ ಚಿಕಿತ್ಸೆಗಾಗಿ ಇಟಲಿಗೆ ವಿಮಾನದ ಮೂಲಕ ಸ್ಥಳಾಂತರಿಸಲಾಗಿದೆ ಎಂದು ಇಟಲಿಯ ವಿದೇಶಾಂಗ ಇಲಾಖೆ ಶುಕ್ರವಾರ ಹೇಳಿದೆ.

ಅಸ್ವಸ್ಥಗೊಂಡಿದ್ದ ಮಕ್ಕಳು ಹಾಗೂ ಅವರ ಕುಟುಂಬದವರು ಸೇರಿದಂತೆ 45 ಮಂದಿ ಬುಧವಾರ ಗಾಝಾದ ರಫಾ ಗಡಿದಾಟು ಮೂಲಕ ಈಜಿಪ್ಟ್ ಪ್ರವೇಶಿಸಿದ್ದು ಕೈರೋದಲ್ಲಿರುವ ಇಟಾಲಿಯನ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಟ್ಟರು.

ಬಳಿಕ ಇಟಲಿಯ ಮಿಲಿಟರಿ ವಿಮಾನದ ಮೂಲಕ ರೋಮ್‍ನ ಸಿಯಾಂಪಿನೊ ವಿಮಾನ ನಿಲ್ದಾಣಕ್ಕೆ ಬುಧವಾರ ಸಂಜೆ ತಲುಪಿದ್ದಾರೆ. ಮಕ್ಕಳಿಗೆ ಚಿಕಿತ್ಸೆ ಒದಗಿಸುವುದು ವಲಯದಲ್ಲಿ ಶಾಂತಿ ಮತ್ತು ಮಾತುಕತೆಯನ್ನು ಉತ್ತೇಜಿಸುವ ಇಟಲಿಯ ಪ್ರಯತ್ನದ ಭಾಗವಾಗಿದೆ. ಒಗ್ಗಟ್ಟಿನಿಂದ ಮಾಡಿದ ರಾಜತಾಂತ್ರಿಕತೆಯು ಅತ್ಯಂತ ದುರ್ಬಲ ಮತ್ತು ರಕ್ಷಣೆಯಿಲ್ಲದವರಲ್ಲಿ ಭರವಸೆಯನ್ನು ಮರುಸ್ಥಾಪಿಸುತ್ತದೆ ಎಂದು ಇಟಲಿಯ ವಿದೇಶಾಂಗ ಸಚಿವ ಅಂಟೋನಿಯೊ ತಜಾನಿ ಹೇಳಿದ್ದಾರೆ.

ಕೆಲವು ಮಕ್ಕಳಿಗೆ ರಾಜಧಾನಿಯಲ್ಲಿ ಚಿಕಿತ್ಸೆ ಒದಗಿಸಲಾಗುತ್ತದೆ, ಇತರರನ್ನು ಟ್ಯುರಿನ್ ಮತ್ತು ಮಿಲಾನ್ ನಗರಗಳಲ್ಲಿನ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತದೆ ಎಂದು ವಿದೇಶಾಂಗ ಇಲಾಖೆಯ ವಕ್ತಾರರು ಹೇಳಿದ್ದಾರೆ.

2023ರ ಅಕ್ಟೋಬರ್ 7ರಂದು ಗಾಝಾದಲ್ಲಿ ಯುದ್ಧ ಆರಂಭಗೊಂಡಂದಿನಿಂದ ಗಾಝಾದಲ್ಲಿ ಕಾಯಿಲೆ ಪೀಡಿತ ಮಕ್ಕಳಿಗೆ ಚಿಕಿತ್ಸೆ ಒದಗಿಸುವ ಹಲವು ಯುರೋಪಿಯನ್ ದೇಶಗಳಲ್ಲಿ ಇಟಲಿಯೂ ಸೇರಿದೆ. ಇಟಲಿಗೆ ಚಿಕಿತ್ಸೆಗಾಗಿ ಕರೆತರುವ ಪ್ರತಿಯೊಂದು ಮಗುವೂ ಭರವಸೆಯ ಸಂಕೇತ, ಜೀವನ ಮತ್ತು ಭವಿಷ್ಯದ ಬದ್ಧತೆಯಾಗಿದೆ ಎಂದು ರಕ್ಷಣಾ ಕಾರ್ಯದರ್ಶಿ ಗುಯಿಡೊ ಕ್ರೊಸೆಟ್ಟೊ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News