ನೆರವು ವಿತರಣೆ ಕೇಂದ್ರಕ್ಕೆ ನುಗ್ಗಿದ ಗಾಝಾ ನಿವಾಸಿಗಳು, ಅರಾಜಕತೆಯ ಅಪಾಯ : ವಿಶ್ವಸಂಸ್ಥೆ ಕಳವಳ

Update: 2023-10-29 18:34 GMT

Photo : PTI 

ಗಾಝಾ: ಗಾಝಾದಲ್ಲಿರುವ ‘ವಿಶ್ವಸಂಸ್ಥೆಯ ಫೆಲೆಸ್ತೀನೀಯನ್ ನಿರಾಶ್ರಿತರ ಏಜೆನ್ಸಿ(ಯುಎನ್ಆರ್ಡಬ್ಲ್ಯೂಎ)ಯ ಗೋದಾಮು ಮತ್ತು ವಿತರಣಾ ಕೇಂದ್ರಕ್ಕೆ ನುಗ್ಗಿದ ಸಾವಿರಾರು ಗಾಝಾ ನಿವಾಸಿಗಳು ಅಲ್ಲಿಂದ ಹಿಟ್ಟು ಮತ್ತಿತರ ದೈನಂದಿನ ಅಗತ್ಯದ ವಸ್ತುಗಳನ್ನು ಹೊತ್ತೊಯ್ದಿದ್ದಾರೆ ಎಂದು ವರದಿಯಾಗಿದೆ.

ಮೂರು ವಾರಗಳ ಯುದ್ಧ ಮತ್ತು ಗಾಝಾದ ಮೇಲೆ ಬಿಗಿಯಾದ ಮುತ್ತಿಗೆಯ ನಂತರ ನಾಗರಿಕ ವ್ಯವಸ್ಥೆಯಲ್ಲಿ ಬಿರುಕು ಬಿಡಲು ಆರಂಭಿಸಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಯುಎನ್ಆರ್ಡಬ್ಲ್ಯೂಎ ಹೇಳಿದೆ.

ಹಮಾಸ್ನ ಮಾರಣಾಂತಿಕ ದಾಳಿಗೆ ಪ್ರತಿಯಾಗಿ ಇಸ್ರೇಲ್ ಗಾಝಾದ ಮೇಲೆ ಬಾಂಬ್ದಾಳಿ ಆರಂಭಿಸಿದಂದಿನಿಂದ ಗಾಝಾಕ್ಕೆ ನೆರವು ಪೂರೈಕೆಗೆ ತೊಡಕಾಗಿದ್ದು ವಿಶ್ವಸಂಸ್ಥೆಯ ನೆರವು ಏಜೆನ್ಸಿಗಳು ಗಾಝಾದ ದೆಯರ್ ಅಲ್-ಬಲಾಹ್ನಲ್ಲಿರುವ ತನ್ನ ಗೋದಾಮುಗಳಿಗೆ ಈಜಿಪ್ಟ್ ಮೂಲಕ ಮಾನವೀಯ ನೆರವನ್ನು ಪೂರೈಸುತ್ತಿವೆ.

ನೇರವಾಗಿ ನೆರವು ವಿತರಣೆ ಮೊಟಕುಗೊಂಡಿದೆ ಮತ್ತು ಈಜಿಪ್ಟ್ ಮೂಲಕ ಟ್ರಕ್ ಗಳಲ್ಲಿ ಪೂರೈಕೆಯಾಗುತ್ತಿರುವ ಅಂತರಾಷ್ಟ್ರೀಯ ನೆರವು ಸಾಕಾಗುತ್ತಿಲ್ಲ. ಸಂಘರ್ಷ ಆರಂಭಕ್ಕೂ ಮುನ್ನ ಅಗತ್ಯ ವಸ್ತುಗಳನ್ನು ಹೊತ್ತ ಸುಮಾರು 500 ಟ್ರಕ್ ಗಳು ಪ್ರತಿ ದಿನ ಈಜಿಪ್ಟ್ ಮೂಲಕ ಗಾಝಾ ತಲುಪುತ್ತಿದ್ದರೆ ಕಳೆದ 3 ವಾರದಿಂದ ಕೇವಲ 54 ಟ್ರಕ್ ಗಳಲ್ಲಿ ಆಹಾರ ಪೂರೈಕೆಯಾಗಿದೆ.

ಗಾಝಾಕ್ಕೆ ಇನ್ನಷ್ಟು ಮಾನವೀಯ ನೆರವು ಒದಗಿಸುವ ಪ್ರಯತ್ನ ವಿಫಲವಾಗಿದೆ. ಜೀವನಾವಶ್ಯಕ ವಸ್ತುಗಳಿಗೆ ಸಮುದಾಯದಿಂದ ಅಗಾಧ ಬೇಡಿಕೆ ಇದ್ದರೆ ನಮ್ಮಲ್ಲಿರುವ ನೆರವಿನ ಸಾಮಾಗ್ರಿಗಳು ಅತ್ಯಲ್ಪವಾಗಿವೆ. ಇಸ್ರೇಲ್ನ ವಾಯುದಾಳಿಯಿಂದಾಗಿ ಗಾಝಾದಲ್ಲಿನ ತನ್ನ 50ಕ್ಕೂ ಅಧಿಕ ಸಿಬಂದಿಗಳು ಸಾವನ್ನಪ್ಪಿರುವುದರಿಂದ ಸೂಕ್ತ ರೀತಿಯಲ್ಲಿ ನೆರವು ವಿತರಣೆ ಸಾಧ್ಯವಾಗುತ್ತಿಲ್ಲ ಎಂದು ವಿಶ್ವಸಂಸ್ಥೆ ಏಜೆನ್ಸಿ ಹೇಳಿದೆ.

ಗಾಝಾ, ಪಶ್ಚಿಮ ದಂಡೆ, ಜೋರ್ಡನ್, ಸಿರಿಯಾ ಮತ್ತು ಲೆಬನಾನ್ಗಳಲ್ಲಿ ಯುಎನ್ಆರ್ಡಬ್ಲ್ಯೂಎ ಶಾಲೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನಿರ್ವಹಿಸುವ ಜತೆಗೆ ಮಾನವೀಯ ನೆರವು ವಿತರಣೆಯಲ್ಲಿ ತೊಡಗಿಕೊಂಡಿದೆ. ಗಾಝಾಕ್ಕೆ ಆಹಾರ, ನೀರು, ಔಷಧ ಮತ್ತು ಇಂಧನ ಪೂರೈಕೆಯನ್ನು ಇಸ್ರೇಲ್ ಸಂಪೂರ್ಣವಾಗಿ ನಿಬರ್ಂಧಿಸಿದ್ದು ಕಳೆದ ವಾರವಷ್ಟೇ ಮಾನವೀಯ ನೆರವು ವಿತರಣೆಗೆ ಅವಕಾಶ ದೊರಕಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News