ಸಾವಿರಾರು ಮಕ್ಕಳ ಸ್ಮಶಾನಭೂಮಿಯಾಗಿ ಮಾರ್ಪಟ್ಟ ಗಾಝಾ: ವಿಶ್ವಸಂಸ್ಥೆ ಕಳವಳ

Update: 2023-11-02 17:08 GMT

Photo- PTI

ಗಾಝಾ: ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದ ಆರಂಭದ 25 ದಿನಗಳಲ್ಲಿ 3,600ಕ್ಕೂ ಅಧಿಕ ಫೆಲೆಸ್ತೀನಿಯನ್ ಮಕ್ಕಳು ಸಾವನ್ನಪ್ಪಿದ್ದಾರೆ. ಗಾಝಾ ಈಗ ಸಾವಿರಾರು ಮಕ್ಕಳ ಸ್ಮಶಾನಭೂಮಿಯಾಗಿ ಮಾರ್ಪಟ್ಟಿದೆ ಎಂದು ಯುನಿಸೆಫ್ ವಕ್ತಾರ ಜೇಮ್ಸ್ ಎಲ್ಡರ್ ಕಳವಳ ವ್ಯಕ್ತಪಡಿಸಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ಪ್ರಪಂಚದಲ್ಲಿ ನಡೆದ ಎಲ್ಲಾ ಸಂಘರ್ಷಗಳಲ್ಲಿ ಮಡಿದ ಮಕ್ಕಳ ಪ್ರಮಾಣಕ್ಕಿಂತ ಗಾಝಾದಲ್ಲಿ ಕೇವಲ 3 ವಾರದ ಸಂಘರ್ಷದಲ್ಲಿ ಸಾವನ್ನಪ್ಪಿದ ಮಕ್ಕಳ ಸಂಖ್ಯೆ ಹೆಚ್ಚು. ಉದಾಹರಣೆಗೆ ಕಳೆದ ವರ್ಷ ಜಾಗತಿಕವಾಗಿ ಸುಮಾರು 24 ಯುದ್ಧಕ್ಷೇತ್ರಗಳಲ್ಲಿ 2,985 ಮಕ್ಕಳು ಹತರಾಗಿದ್ದಾರೆ ಎಂದು `ಸೇವ್ ದಿ ಚಿಲ್ಡ್ರನ್ಸ್' ಸಂಸ್ಥೆಯ ಅಂಕಿಅಂಶವನ್ನು ಉಲ್ಲೇಖಿಸಿ ಅವರು ಮಾಹಿತಿ ನೀಡಿದ್ದಾರೆ.

ಗಾಝಾ ಪಟ್ಟಿಯ 2.3 ದಶಲಕ್ಷ ನಿವಾಸಿಗಳಲ್ಲಿ ಸುಮಾರು 50%ದಷ್ಟು 18 ವರ್ಷದೊಳಗಿನವರು ಮತ್ತು ಗಾಝಾದಲ್ಲಿ ಇದುವರೆಗಿನ ಯುದ್ಧದಲ್ಲಿ ಮೃತಪಟ್ಟವರಲ್ಲಿ 40%ದಷ್ಟು ಮಕ್ಕಳು ಎಂದು ಗಾಝಾದ ಆರೋಗ್ಯ ಇಲಾಖೆ ಹೇಳಿದೆ. ಅಕ್ಟೋಬರ್ 26ರವರೆಗಿನ ಅಂಕಿಅಂಶದ ಪ್ರಕಾರ, 12 ವರ್ಷಕ್ಕಿಂತ ಕೆಳಹರೆಯದ 2001 ಮಕ್ಕಳು, 3 ವರ್ಷಕ್ಕೂ ಕೆಳಗಿನ 615 ಮಕ್ಕಳು ಗಾಝಾದಲ್ಲಿ ಹತರಾಗಿದ್ದಾರೆ. ವೈಮಾನಿಕ ದಾಳಿ, ತಪ್ಪು ಗುರಿಗೆ ಅಪ್ಪಳಿಸಿದ ರಾಕೆಟ್‍ಗಳ ಹೊಡೆತಕ್ಕೆ ಸಿಲುಕಿ, ಸ್ಫೋಟದಿಂದ ಸುಟ್ಟುಹೋಗಿ ಅಥವಾ ಬಾಂಬ್‍ದಾಳಿಯಲ್ಲಿ ನೆಲಸಮಗೊಂಡ ಕಟ್ಟಡಗಳ ಅವಶೇಷಗಳಡಿ ಸಿಲುಕಿ ಮಕ್ಕಳು, ನವಜಾತ ಶಿಶುಗಳು ಪ್ರಾಣ ಕಳೆದುಕೊಂಡಿವೆ ಎಂದು ಇಲಾಖೆ ಹೇಳಿದೆ.

ಗಾಝಾದಲ್ಲಿ ಪೋಷಕರಾಗಿರುವುದು ಶಾಪವಾಗಿದೆ. ಕ್ಷಿಪಣಿಗಳು ಮನೆಗಳಿಗೆ ಅಪ್ಪಳಿಸಿದಾಗ ಮನೆಗಳು ಮಕ್ಕಳ ತಲೆಮೇಲೆ ಉರುಳಿಬೀಳುತ್ತವೆ. ಕುಸಿದು ಬಿದ್ದ ಅವಶೇಷಗಳಡಿಯಿಂದ ರಕ್ಷಿಸಲ್ಪಟ್ಟ ಮಕ್ಕಳು ಕೈ, ಕಾಲು, ತಲೆಗಳಿಗೆ ಬ್ಯಾಂಡೇಜ್ ಸುತ್ತಿಕೊಂಡು ಆಸ್ಪತ್ರೆಯಲ್ಲಿ ಅಳುತ್ತಾ ಮಲಗಿರುವುದನ್ನು ನೋಡಿದಾಗ ಸಂಕಟವಾಗುತ್ತದೆ ಎಂದು ಹಲವು ಪೋಷಕರು ಅಳಲು ತೋಡಿಕೊಂಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಹಮಾಸ್ ನೆಲೆಗಳು ಮತ್ತು ಮೂಲಸೌಕರ್ಯವನ್ನು ಗುರಿಯಾಗಿಸಿ ತಾನು ದಾಳಿ ನಡೆಸುತ್ತಿದ್ದೇನೆ. ಗಾಝಾದಲ್ಲಿ ನಾಗರಿಕರನ್ನು ಮಾನವ ಗುರಾಣಿಯಾಗಿ ಹಮಾಸ್ ಬಳಸಿಕೊಳ್ಳುತ್ತಿದ್ದು ಅವರು ಇಸ್ರೇಲ್‍ನತ್ತ ಹಾರಿಸಿದ 500ಕ್ಕೂ ಅಧಿಕ ರಾಕೆಟ್‍ಗಳು ಗುರಿತಪ್ಪಿ ಗಾಝಾಕ್ಕೇ ಅಪ್ಪಳಿಸಿದೆ ಎಂದು ಇಸ್ರೇಲ್ ಹೇಳುತ್ತಿದೆ. ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ಕ್ಷಿಪ್ರ ದಾಳಿಯಲ್ಲಿ ಇಸ್ರೇಲ್‍ನಲ್ಲಿ ಹಲವು ಮಕ್ಕಳೂ ಮೃತಪಟ್ಟಿದ್ದಾರೆ. ಹಮಾಸ್ ಒತ್ತೆಯಾಳಾಗಿ ಇರಿಸಿಕೊಂಡವರಲ್ಲಿ ಸುಮಾರು 30 ಮಕ್ಕಳೂ ಸೇರಿವೆ ಎಂದು ಯುನಿಸೆಫ್ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News