ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್ ಹತ್ಯೆ ಯತ್ನ: ಜಾಗತಿಕ ನಾಯಕರು ಪ್ರತಿಕ್ರಿಯಿಸಿದ್ದು ಹೀಗೆ...
ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರ‍್ಯಾಲಿಯಲ್ಲಿ ಗುಂಡಿನ ದಾಳಿ ನಡೆದು ಶಂಕಿತ ದಾಳಿಕೋರ ಮತ್ತು ಟ್ರಂಪ್ ಸಹಾಯಕರೊಬ್ಬರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇತರ ಇಬ್ಬರು ಗಾಯಗೊಂಡಿದ್ದಾರೆ. ಈ ಗುಂಡಿನ ದಾಳಿಗೆ ಜಾಗತಿಕ ನಾಯಕರು ಆಘಾತ ವ್ಯಕ್ತಪಡಿಸಿದ್ದಾರೆ.
ಪೆನ್ಸೆಲ್ವೇನಿಯಾದ ಬಟ್ಲರ್ ನಲ್ಲಿ ಶನಿವಾರ ಈ ದಾಳಿ ನಡೆದಿದ್ದು, ರ‍್ಯಾಲಿಯಲ್ಲಿ ಭಾಗವಹಿಸಿದ್ದವರ ಮುಂದೆ ನಿಂತಿರುವ ಟ್ರಂಪ್ ಅವರ ಬಲ ಕಿವಿ ಮತ್ತು ಮುಖದ ಮೇಲೆ ರಕ್ತ ಕಂಡುಬಂದಿದೆ. ಘಟನೆಗೆ ಎಲ್ಲೆಡೆ ಖಂಡನೆ ವ್ಯಕ್ತವಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಹಿತ ವಿವಿಧ ದೇಶಗಳ ನಾಯಕರು ಆಘಾತ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, "ನನ್ನ ಸ್ನೇಹಿತ, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲಿನ ದಾಳಿಯಿಂದ ತೀವ್ರ ಕಳವಳಗೊಂಡಿದ್ದೇನೆ. ಘಟನೆಯನ್ನು ಬಲವಾಗಿ ಖಂಡಿಸುತ್ತೇನೆ. ರಾಜಕೀಯ ಮತ್ತು ಪ್ರಜಾಪ್ರಭುತ್ವದಲ್ಲಿ ಹಿಂಸೆಗೆ ಸ್ಥಾನವಿಲ್ಲ. ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ" ಎಂದಿದ್ದಾರೆ.
"ಟ್ರಂಪ್ ಅವರ ಹತ್ಯೆ ಯತ್ನದಿಂದ ಆಘಾತವಾಗಿದೆ. ಇಂತಹ ಘಟನೆಗಳನ್ನು ಬಲವಾಗಿ ಖಂಡಿಸಬೇಕು. ಅವರು ಶೀಘ್ರ ಗುಣಮುಖರಾಗಲಿ" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
"ಟ್ರಂಪ್ ಕ್ಷೇಮವಾಗಿದ್ದು, ನಾನು ಮಾಹಿತಿ ಪಡೆಯುತ್ತಿದ್ದೇನೆ, ಶೀಘ್ರದಲ್ಲೇ ಅವರ ಜೊತೆ ಮಾತನಾಡಲಿದ್ದೇನೆ. ಟ್ರಂಪ್ ಅವರು ಸುರಕ್ಷಿತವಾಗಿದ್ದಾರೆ ಎಂದು ಹೇಳಲು ಬಯಸುತ್ತೇನೆ. ಅಮೆರಿಕದಲ್ಲಿ ಇಂತಹ ಹಿಂಸಾಚಾರವನ್ನು ಖಂಡಿಸಲು ನಾವು ಒಂದು ರಾಷ್ಟ್ರವಾಗಿ ಒಗ್ಗಟ್ಟಾಗಬೇಕು" ಎಂದು ಅಮೆರಿಕದ ಅಧ್ಯಕ್ಷ ಬೈಡನ್ ಎಕ್ಸ್ ಪೋಸ್ಟ್ ನಲ್ಲಿ ಹೇಳಿದ್ದಾರೆ.
"ಆಘಾತಕಾರಿ ಕೃತ್ಯ ಕಂಡು ಆತಂಕವಾಗಿದೆ. ಯಾವುದೇ ರೀತಿಯ ರಾಜಕೀಯ ಹಿಂಸೆಗೆ ನಮ್ಮ ಸಮಾಜದಲ್ಲಿ ಅವಕಾಶ ನೀಡಬಾರದು" ಎಂದು ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಹೇಳಿದ್ದಾರೆ.
"ಪೆನ್ಸಿಲ್ವೇನಿಯಾದಲ್ಲಿ ಮಾಜಿ ಅಧ್ಯಕ್ಷ ಟ್ರಂಪ್ ಅವರ ಮೇಲಿನ ದಾಳಿಯ ಕುರಿತು ಮಾಹಿತಿ ಪಡೆದುಕೊಂಡಿದ್ದೇನೆ. ಅವರಿಗೆ ಗಂಭೀರ ಗಾಯವಾಗಿಲ್ಲ. ಟ್ರಂಪ್ ಹಾಗೂ ಘಟನೆಯಲ್ಲಿ ಗಾಯಗೊಂಡವರಿಗಾಗಿ ಪ್ರಾರ್ಥಿಸುತ್ತೇನೆ. ತಕ್ಷಣ ಕ್ರಮ ಕೈಗೊಂಡಿರುವ ಅಮೆರಿಕದ ಸೀಕ್ರೆಟ್ ಸರ್ವಿಸ್, ಸ್ಥಳೀಯ ಅಧಿಕಾರಿಗಳಿಗೆ ಕೃತಜ್ಞರಾಗಿದ್ದೇವೆ" ಎಂದು ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಕಮಲಾ ಹ್ಯಾರಿಸ್ ಹೇಳಿದ್ದಾರೆ.
ಟ್ರಂಪ್ ಹತ್ಯೆ ಯತ್ನಕ್ಕೆ ಆಘಾತ ವ್ಯಕ್ತಪಡಿಸಿರುವ ಜಪಾನ್ ಪ್ರಧಾನಿ ಫುಮಿಯೊ ಕಿಶಿದಾ, "ಪ್ರಜಾಪ್ರಭುತ್ವ ವ್ಯವಸ್ಥೆಗೆ ಸವಾಲಾಗುವ ಯಾವುದೇ ರೀತಿಯ ಹಿಂಸೆಯ ವಿರುದ್ಧ ನಾವು ಒಗ್ಗಟ್ಟಾಗಿ ನಿಲ್ಲಬೇಕು" ಎಂದಿದ್ದಾರೆ.
'ಪ್ರಜಾಪ್ರಭುತ್ವ ವ್ಯವಸ್ಥೆಗೆ ಸವಾಲಾಗುವ ಯಾವುದೇ ರೀತಿಯ ಹಿಂಸೆಯ ವಿರುದ್ಧ ನಾವೆಲ್ಲ ಒಂದಾಗಿ ನಿಲ್ಲಬೇಕು' ಎಂದು ಜಪಾನ್ ಪ್ರಧಾನಿ ಫುಮಿಯೊ ಕಿಶಿದಾ ಕರೆ ನೀಡಿದ್ದಾರೆ. ಆಸ್ಟ್ರೇಲಿಯಾ ಪ್ರಧಾನಿ ಆ್ಯಂಟನಿ ಅಲ್ಬನೆಸ್ ಅವರೂ ದಾಳಿಯನ್ನು ಖಂಡಿಸಿದ್ದಾರೆ.
ಘಟನೆ ಕುರಿತು ಆಘಾತ ವ್ಯಕ್ತಪಡಿಸಿರುವ ಹಂಗೇರಿ ಪ್ರಧಾನಿ ವಿಕ್ಟರ್ ಒರ್ಬನ್, "ಇದು ಅತ್ಯಂತ ನೋವಿನ ಸಮಯ, ಗಾಯಾಳುಗಳ ಚೇತರಿಕೆಗೆ ಪ್ರಾರ್ಥಿಸುತ್ತೇನೆ" ಎಂದು ಹೇಳಿದ್ದಾರೆ.