ಬಲೋಚಿಸ್ತಾನದಲ್ಲಿ ಭದ್ರತಾ ಪಡೆ - ಉಗ್ರಗಾಮಿಗಳ ನಡುವೆ ನಡೆದ ಗುಂಡಿನ ಚಕಮಕಿ ; ಐವರು ಯೋಧರ ಸಾವು

Update: 2024-01-14 16:50 GMT

ಸಾಂದರ್ಭಿಕ ಚಿತ್ರ |Photo: PTI 

ಲಾಹೋರ್ : ನೈಋತ್ಯ ಪಾಕಿಸ್ತಾನದ ಬಲೋಚಿಸ್ತಾನ ಪ್ರಾಂತದಲ್ಲಿ ಭದ್ರತಾ ಪಡೆ ಮತ್ತು ಉಗ್ರಗಾಮಿಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಐವರು ಯೋಧರು ಸಾವನ್ನಪ್ಪಿರುವುದಾಗಿ ಸೇನೆಯ ಅಧಿಕಾರಿಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಬಲೋಚಿಸ್ತಾನದ ಕೆಚ್ ಜಿಲ್ಲೆಯ ಬುಲೆದಾ ಪ್ರದೇಶದಲ್ಲಿ ಭದ್ರತಾ ಪಡೆ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಭದ್ರತಾ ಪಡೆಯ ವಾಹನವನ್ನು ಉಗ್ರರು ಇಐಡಿ(ಸುಧಾರಿತ ಸ್ಫೋಟಕ ಸಾಧನ) ಬಳಸಿ ಸ್ಫೋಟಿಸಿದ್ದಾರೆ. ಬಳಿಕ ಯೋಧರತ್ತ ಗುಂಡಿನ ದಾಳಿ ನಡೆಸಿದ್ದು ಐವರು ಯೋಧರು ಮೃತಪಟ್ಟಿದ್ದಾರೆ.

ಭದ್ರತಾ ಪಡೆಯ ಪ್ರತಿದಾಳಿಯಲ್ಲಿ ಮೂವರು ಉಗ್ರರು ಮೃತಪಟ್ಟಿದ್ದು ಉಳಿದವರು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಹೆಚ್ಚುವರಿ ಪಡೆಯನ್ನು ರವಾನಿಸಲಾಗಿದ್ದು ಉಗ್ರರ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಭದ್ರತಾ ಪಡೆಯ ಮೂಲಗಳನ್ನು ಉಲ್ಲೇಖಿಸಿದ ಮಾಧ್ಯಮ ವರದಿ ಹೇಳಿದೆ. ಈ ವಾರದ ಆರಂಭದಲ್ಲಿ ನಡೆದಿದ್ದ ಮತ್ತೊಂದು ಘಟನೆಯಲ್ಲಿ ಪ್ರಕ್ಷುಬ್ಧ ಖೈಬರ್ ಪಖ್ತೂಂಕ್ವಾ ಪ್ರಾಂತದ ಕೊಹಾಟ್ ನಗರದ ಹೆದ್ದಾರಿಯಲ್ಲಿನ ಪೊಲೀಸ್ ಚೆಕ್ಪೋಸ್ಟ್ನ ಮೇಲೆ ಉಗ್ರರ ತಂಡ ನಡೆಸಿದ ದಾಳಿಯಲ್ಲಿ ಮೂವರು ಪೊಲೀಸರು ಹಾಗೂ ಓರ್ವ ನಾಗರಿಕ ಹತರಾಗಿದ್ದರು. ತಾಲಿಬಾನ್ ಜತೆ ಸಂಪರ್ಕ ಹೊಂದಿರುವ ಪಾಕಿಸ್ತಾನ್ ತಾಲಿಬಾನ್ ಸಂಘಟನೆ ಈ ಕೃತ್ಯ ಎಸಗಿರುವ ಶಂಕೆಯಿದೆ ಎಂದು ಪೊಲೀಸರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News