ಹೈಟಿಯಲ್ಲಿ 4 ಸಾವಿರಕ್ಕೂ ಅಧಿಕ ಕೈದಿಗಳ ಪರಾರಿ ; ತುರ್ತು ಪರಿಸ್ಥಿತಿ ಘೋಷಣೆ
ಪೋರ್ಟ್-ಔ-ಪ್ರಿನ್ಸ್ : ಹೈಟಿಯಲ್ಲಿ ಕ್ರಿಮಿನಲ್ ಗ್ಯಾಂಗ್‍ನ ಬಂದೂಕುಧಾರಿಗಳು ಎರಡು ಪ್ರಮುಖ ಜೈಲುಗಳ ಮೇಲೆ ದಾಳಿ ನಡೆಸಿ 4000ಕ್ಕೂ ಅಧಿಕ ಕೈದಿಗಳನ್ನು ಬಿಡುಗಡೆಗೊಳಿಸಿದ್ದು ಪರಿಸ್ಥಿತಿ ನಿಯಂತ್ರಿಸಲು ದೇಶದಲ್ಲಿ 72 ಗಂಟೆಗಳ ತುರ್ತು ಪರಿಸ್ಥಿತಿ(ರವಿವಾರ ಸಂಜೆಯಿಂದ) ಘೋಷಿಸಲಾಗಿದ್ದು ರಾತ್ರಿ ಕರ್ಫ್ಯೂ ಜಾರಿಗೊಳಿಸಿರುವುದಾಗಿ ವರದಿಯಾಗಿದೆ.
ಜೈಲಿನ ಮೇಲಿನ ದಾಳಿಯನ್ನು ಹಿಮ್ಮೆಟ್ಟಿಸಲು ಭದ್ರತಾ ಸಿಬಂದಿ ಪ್ರತಿದಾಳಿ ನಡೆಸಿದರೂ ಕ್ರಿಮಿನಲ್‍ಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರಿಂದ ಭದ್ರತಾ ಸಿಬಂದಿ ವಿಫಲವಾದರು. ಜೈಲಿನ ಪ್ರವೇಶ ದ್ವಾರದ ಬಳಿ ಮೂವರ ಮೃತದೇಹ ಪತ್ತೆಯಾಗಿದೆ. ಕೈದಿಗಳನ್ನು ಬಿಡುಗಡೆಗೊಳಿಸಿದ ಬಳಿಕ ಕ್ರಿಮಿನಲ್‍ಗಳು ಪ್ರಮುಖ ರಸ್ತೆಗಳಲ್ಲಿ ಟೈರ್ ಗಳಿಗೆ ಬೆಂಕಿ ಹಚ್ಚಿ ರಸ್ತೆ ತಡೆ ನಡೆಸಿ ಅಲ್ಲಿಂದ ಪರಾರಿಯಾಗಿದ್ದಾರೆ. ಪರಾರಿಯಾದ ಕೈದಿಗಳಲ್ಲಿ ಕೊಲೆ, ಅಪಹರಣ ಹಾಗೂ ಇತರ ಹಿಂಸಾತ್ಮಕ ಅಪರಾಧಗಳಿಗೆ ಶಿಕ್ಷೆಗೊಳಗಾದ ಕುಖ್ಯಾತ ಕ್ರಿಮಿನಲ್‍ಗಳೂ ಸೇರಿದ್ದಾರೆ. ಈ ಮಧ್ಯೆ, ರಾಜಧಾನಿಯ ನೆರೆಯ ಪ್ರದೇಶದಲ್ಲಿ ರವಿವಾರ ಕೈಗಳನ್ನು ಬೆನ್ನ ಹಿಂದಕ್ಕೆ ಕಟ್ಟಲ್ಪಟ್ಟ ಸ್ಥಿತಿಯಲ್ಲಿದ್ದ ಎರಡು ರಕ್ತಸಿಕ್ತ ಮೃತದೇಹಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ.
ಪರಿಸ್ಥಿತಿಯನ್ನು ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಲಾಗಿದೆ ಎಂದು ಉಸ್ತುವಾರಿ ಪ್ರಧಾನಿಯಾಗಿರುವ ವಿತ್ತಸಚಿವ ಪ್ಯಾಟ್ರಿಕ್ ಬೊಯ್ವರ್ಟ್ ಹೇಳಿದ್ದಾರೆ. ದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯನ್ನು ಕರೆಸಿಕೊಳ್ಳುವ ಪ್ರಯತ್ನಕ್ಕೆ ಬೆಂಬಲ ಕ್ರೋಢೀಕರಿಸಲು ಹೈಟಿ ಪ್ರಧಾನಿ ಅರಿಯಲ್ ಹೆನ್ರಿ ವಿದೇಶದ ಪ್ರವಾಸದಲ್ಲಿದ್ದಾರೆ.