ಒಕ್ಕೂಟ ಸರಕಾರ ರಚನೆಗೆ ಹಮಾಸ್, ಫತಾಹ್ ಸಮ್ಮತಿ

Update: 2024-07-24 18:04 GMT
ಒಕ್ಕೂಟ ಸರಕಾರ ರಚನೆಗೆ ಹಮಾಸ್, ಫತಾಹ್ ಸಮ್ಮತಿ

PC : timesofindia

  • whatsapp icon

ಬೀಜಿಂಗ್ : ತಮ್ಮ  ಸುದೀರ್ಘ ಪೈಪೋಟಿಯನ್ನು ಅಂತ್ಯಗೊಳಿಸುವ ಕ್ರಮವಾಗಿ ಒಟ್ಟಾಗಿ ಸರಕಾರ ರಚಿಸುವ ಒಪ್ಪಂದಕ್ಕೆ ಫೆಲೆಸ್ತೀನ್‌ನ ಬಣಗಳಾದ ಹಮಾಸ್ ಮತ್ತು ಫತಾಹ್ ಸಹಿ ಹಾಕಿವೆ. ಚೀನಾದ ಮಧ್ಯಸ್ಥಿಕೆಯಲ್ಲಿ ಒಪ್ಪಂದ ರೂಪುಗೊಂಡಿರುವುದಾಗಿ ವರದಿಯಾಗಿದೆ.

ಈ ಒಪ್ಪಂದ ಆರಂಭಿಕ ಹಂತವಾಗಿದೆ ಮತ್ತು ಯಾವುದೇ ಖಾತರಿ ಅಥವಾ ಕಾಲಾವಧಿಯನ್ನು ಒದಗಿಸುವುದಿಲ್ಲ ಎಂದು ಎರಡೂ ಬಣಗಳು ಹೇಳಿವೆ. ಈ ಹಿಂದಿನ ಇಂತಹ ಘೋಷಣೆಗಳು ವಿಫಲವಾಗಿವೆ. ಚೀನಾ ಮಧ್ಯಸ್ಥಿಕೆಯಲ್ಲಿ ನಡೆದಿರುವ ಒಪ್ಪಂದವು ಕಳೆದ 17  ವರ್ಷಗಳಿಂದ ಗಾಝಾ ಪಟ್ಟಿಯಲ್ಲಿ ಆಡಳಿತ ನಡೆಸುತ್ತಿರುವ ಹಮಾಸ್ ಹಾಗೂ ಆಕ್ರಮಿತ ಪಶ್ಚಿಮದಂಡೆಯ ಕೆಲವು ಭಾಗಗಳನ್ನು ನಿಯಂತ್ರಿಸುವ ಅಮೆರಿಕ ಬೆಂಬಲಿತ ಫೆಲೆಸ್ತೀನ್ ಪ್ರಾಧಿಕಾರ(ಪಿಎ)ದ ಪ್ರಮುಖ ಘಟಕವಾದ ಫತಾಹ್ ನಡುವೆ ಒಗ್ಗಟ್ಟು ಮೂಡಿಸಲು ಯಶಸ್ವಿಯಾಗಲಿದೆ ಎಂದು ಚೀನಾ ಸರಕಾರಿ ಸ್ವಾಮ್ಯದ ಸಿಸಿಟಿವಿ ವರದಿ ಮಾಡಿದೆ.

`ಫೆಲೆಸ್ತೀನ್‌ನ ಎರಡು ಪ್ರಮುಖ ಬಣ ಹಾಗೂ ಇತರ ಕೆಲವು ಸಣ್ಣ ಬಣಗಳು ಬೀಜಿಂಗ್ ಘೋಷಣೆಗೆ ಸಹಿ ಹಾಕಿವೆ. ವಿಭಜನೆಯನ್ನು ಕೊನೆಗೊಳಿಸುವುದು ಮತ್ತು ಏಕತೆಯನ್ನು ಬಲಪಡಿಸುವುದು ಮತ್ತು ಫೆಲೆಸ್ತೀನ್ ಪ್ರಾಂತ್ಯಗಳಿಗೆ ಏಕತೆಯ ಸರಕಾರವನ್ನು ರಚಿಸುವುದಾಗಿ ಪ್ರತಿಜ್ಞೆ ಮಾಡಿವೆ. ಹೇಗೆ ಒಗ್ಗೂಡಿ ಕೆಲಸ ಮಾಡಬಹುದು ಎಂಬುದರ ಕುರಿತು ವಿಶಾಲವಾದ ರೂಪರೇಖೆಗಳನ್ನು ನೀಡಿದೆ. 

ಗಾಝಾ ಯುದ್ಧ 10ನೇ ತಿಂಗಳಿಗೆ ಮುಂದುವರಿದಿರುವ ಮತ್ತು ಅಂತರಾಷ್ಟ್ರೀಯ ಬೆಂಬಲದ ಕದನ ವಿರಾಮ ಮಾತುಕತೆ ಪ್ರಗತಿ ಸಾಧಿಸುವ ಸೂಚನೆ ಇರುವ ನಿರ್ಣಾಯಕ ಸಮಯದಲ್ಲಿ ಈ ಘೋಷಣೆ ಹೊರಬಿದ್ದಿದೆ. ಆದರೆ ಯುದ್ಧಾನಂತರ ಗಾಝಾವನ್ನು ಯಾರು ಮುನ್ನಡೆಸುತ್ತಾರೆ ಎಂಬ ಪ್ರಶ್ನೆ ಉಳಿದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.ಸೌದಿ ಅರೆಬಿಯಾ ಮತ್ತು ಇರಾನ್ ನಡುವಿನ ಸಂಬಂಧಗಳ ಮರುಸ್ಥಾಪನೆಯಲ್ಲಿ ಯಶಸ್ವಿಯಾಗಿ ಮಧ್ಯಸ್ಥಿಕೆ ವಹಿಸಿದ ಬಳಿಕ ಇದೀಗ ಚೀನಾ ಮಧ್ಯಪ್ರಾಚ್ಯ ರಾಜತಾಂತ್ರಿಕತೆಯಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದೆ.

 

ಒಪ್ಪಂದಕ್ಕೆ ಇಸ್ರೇಲ್ ಖಂಡನೆ

ಹಮಾಸ್ ಮತ್ತು ಫತಾಹ್ ನಡುವಿನ ಒಪ್ಪಂದವನ್ನು ಇಸ್ರೇಲ್ ಖಂಡಿಸಿದೆ. ಇಸ್ರೇಲ್‌ಗೆ ಸ್ಪಷ್ಟವಾಗಿ ಮಾನ್ಯತೆ ನೀಡದ ಹೊರತು ಹಮಾಸ್ ಒಳಗೊಂಡಿರುವ ಯಾವುದೇ ಫೆಲೆಸ್ತೀನ್ ಸರಕಾರವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಅಮೆರಿಕ ಹಾಗೂ ಇತರ ಪಾಶ್ಚಿಮಾತ್ಯ ದೇಶಗಳು ಹೇಳುತ್ತಿವೆ.

ಆದರೆ ಯುದ್ಧಾನಂತರ ಗಾಝಾದಲ್ಲಿ ಹಮಾಸ್‌ಗೆ ಯಾವುದೇ ಪಾತ್ರ ಇರಬಾರದು ಎಂದು ಇಸ್ರೇಲ್ ಪಟ್ಟುಹಿಡಿದಿದೆ. ಯುದ್ಧ ಅಂತ್ಯಗೊಂಡ ಬಳಿಕ ಫೆಲೆಸ್ತೀನಿಯನ್ ಪ್ರಾಧಿಕಾರ ಗಾಝಾ ಆಡಳಿತವನ್ನು ನಿರ್ವಹಿಸಬೇಕು ಎಂಬ ಅಮೆರಿಕದ ಪ್ರಸ್ತಾವನೆಯನ್ನೂ ಇಸ್ರೇಲ್ ವಿರೋಧಿಸುತ್ತಿದೆ. ಚೀನಾದ ಮಧ್ಯಸ್ಥಿಕೆಯಲ್ಲಿ ನಡೆದಿರುವ ಒಪ್ಪಂದದ ಬಗ್ಗೆ ಪ್ರತಿಕ್ರಿಯಿಸಿರುವ ಇಸ್ರೇಲ್ ವಿದೇಶಾಂಗ ಇಲಾಖೆ `ಹಮಾಸ್ ಆಡಳಿತವನ್ನು ಹತ್ತಿಕ್ಕಲಾಗುವುದರಿಂದ ಗಾಝಾದಲ್ಲಿ ಹಮಾಸ್ ಮತ್ತು ಫತಾಹ್ ಜಂಟಿ ಸರಕಾರ ಸಾಧ್ಯವಿಲ್ಲ' ಎಂದಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News