ಇಸ್ರೇಲ್ ಮೇಲೆ ಹಮಾಸ್ ಭೀಕರ ರಾಕೆಟ್ ದಾಳಿ
ಹೊಸದಿಲ್ಲಿ : ಹಮಾಸ್ ಗುಂಪು ಶನಿವಾರ ಇಸ್ರೇಲ್ ಮೇಲೆ ನಡೆಸಿದ ಹಠಾತ್ ದಾಳಿಯಲ್ಲಿ ಕನಿಷ್ಠ 40 ಜನರು ಕೊಲ್ಲಲ್ಪಟ್ಟಿದ್ದು, 500ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ಆ ದೇಶದ ರಾಷ್ಟ್ರೀಯ ರಕ್ಷಣಾ ಸೇವೆಯು ತಿಳಿಸಿದೆ. ಭೀಕರ ರಾಕೆಟ್ ದಾಳಿಗೆ ತಕ್ಕ ಉತ್ತರ ನೀಡಲು ಪಣ ತೊಟ್ಟಿರುವ ಇಸ್ರೇಲ್ ಹಮಾಸ್ ವಿರುದ್ಧ ಯುದ್ಧವನ್ನು ಘೋಷಿಸಿದ್ದು, ಗಾಝಾದ ಮೇಲೆ ವಾಯು ದಾಳಿಗಳನ್ನು ಆರಂಭಿಸಿದೆ.
ತನ್ನ ದೇಶವು ಯುದ್ಧದಲ್ಲಿದೆ ಮತ್ತು ಹಮಾಸ್ ಅಭೂತಪೂರ್ವ ಬೆಲೆಯನ್ನು ತೆರಲಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಹು ಹೇಳಿದ್ದಾರೆ. ಹಬ್ಬದ ರಜಾದಿನದ ಬೆಳಿಗ್ಗೆ 5000ಕ್ಕೂ ಅಧಿಕ ರಾಕೆಟ್ ಗಳು ಇಸ್ರೇಲಿನಾದ್ಯಂತ ಅಪ್ಪಳಿಸಿದ್ದು, ಸೈರನ್ ಗಳು ದೊಡ್ಡದಾಗಿ ಮೊಳಗುತ್ತಿದ್ದವು. ದೇಶದ ರಕ್ಷಣಾ ಪಡೆಗಳು ಭಯೋತ್ಪಾದಕರು ಎಂದು ತಾವು ಪರಿಗಣಿಸಿರುವ ಹಮಾಸ್ ಹೋರಾಟಗಾರರಿಂದ ಒಳನುಸುಳುವಿಕೆಯನ್ನೂ ಆರೋಪಿಸಿವೆ. ದಾಳಿಯಲ್ಲಿ ಪ್ಯಾರಾಗ್ಲೈಡರ್ಗಳ ಬಳಕೆಯನ್ನು ಮತ್ತು ರಸ್ತೆಗಳಲ್ಲಿ ಸಾಗುತ್ತಿದ್ದ ಕಾರುಗಳ ಮೇಲೆ ಗುಂಡು ಹಾರಾಟಗಳನ್ನು ಇಸ್ರೇಲ್ ಬಿಡುಗಡೆಗೊಳಿಸಿರುವ ದೃಶ್ಯಾವಳಿಗಳು ತೋರಿಸಿವೆ.
ಇಸ್ರೇಲ್ ವಿರುದ್ಧ ಯುದ್ಧವನ್ನು ಆರಂಭಿಸುವ ಮೂಲಕ ಹಮಾಸ್ ಘೋರ ತಪ್ಪನ್ನು ಮಾಡಿದೆ. ಇಸ್ರೇಲಿ ಸೇನಾಪಡೆಗಳು ಪ್ರತಿ ಸ್ಥಳದಲ್ಲಿಯೂ ಶತ್ರುಗಳ ವಿರುದ್ಧ ಹೋರಾಡುತ್ತಿವೆ ಎಂದು ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಹೇಳಿದ್ದಾರೆ.
‘ಇಸ್ರೇಲಿ ರಕ್ಷಣಾ ಪಡೆಗಳು ಯುದ್ಧ ಸನ್ನದ್ಧತೆ ಸ್ಥಿತಿಯನ್ನು ಘೋಷಿಸಿವೆ. ಗಾಝಾದಿಂದ ಇಸ್ರೇಲ್ ಭೂಪ್ರದೇಶದಲ್ಲಿ ವ್ಯಾಪಕ ರಾಕೆಟ್ ದಾಳಿಗಳು ನಡೆದಿವೆ ಮತ್ತು ಭಯೋತ್ಪಾದಕರು ವಿವಿಧೆಡೆಗಳಿಂದ ದೇಶದೊಳಕ್ಕೆ ನುಸುಳಿದ್ದಾರೆ ’ ಎಂದು ಈ ಮೊದಲು ತಿಳಿಸಿದ್ದ ಇಸ್ರೇಲಿ ಸೇನೆಯು ದೇಶವನ್ನು ರಕ್ಷಿಸುವ ಪ್ರತಿಜ್ಞೆಯನ್ನು ಮಾಡಿತ್ತು.
‘ಆಪರೇಷನ್ ಅಲ್-ಅಕ್ಸಾ ಫ್ಲಡ್ ’ಅನ್ನು ತಾನು ಆರಂಭಿಸಿರುವುದಾಗಿ ಘೋಷಿಸಿರುವ ಹಮಾಸ್ನ ಸಶಸ್ತ್ರ ಘಟಕವು, 20 ನಿಮಿಷಗಳ ಮೊದಲ ದಾಳಿಯಲ್ಲಿ ತಾನು 5,000ಕ್ಕೂ ಅಧಿಕ ರಾಕೆಟ್ ಗಳನ್ನು ಉಡಾಯಿಸಿದ್ದೇನೆ ಎಂದು ತಿಳಿಸಿದೆ.
ಜವಾಬ್ದಾರಿಯಲ್ಲದ ಉತ್ತರದಾಯಿತ್ವದ ಸಮಯವು ಮುಗಿದಿದೆ ಎನ್ನುವುದನ್ನು ಶತ್ರುಗಳಿಗೆ ಅರ್ಥ ಮಾಡಿಸಲು ದೇವರ ನೆರವಿನಿಂದ ಇದೆಲ್ಲಕ್ಕೂ ಅಂತ್ಯ ಹಾಡಲು ನಾವು ನಿರ್ಧರಿಸಿದ್ದೇವೆ ಎಂದು ಹಮಾಸ್ ಹೋರಾಟಗಾರರ ನಾಯಕ ಮುಹಮ್ಮದ್ ಡೀಫ್ ಅವರು ಪೂರ್ವ ಮುದ್ರಿತ ಭಾಷಣದಲ್ಲಿ ಹೇಳಿದ್ದಾರೆ. ಮಹಿಳೆಯರ ಮೇಲೆ ದಾಳಿಗಳಿಗೆ,ಅಲ್-ಅಕ್ಸಾ ಮಸೀದಿಯನ್ನು ಅಪವಿತ್ರಗೊಳಿಸಿದ್ದಕ್ಕೆ ಮತ್ತು ಗಾಝಾದ ಅತಿಕ್ರಮಣಕ್ಕೆ ಉತ್ತರವಾಗಿ ದಾಳಿಯನ್ನು ಆರಂಭಿಸಲಾಗಿದೆ ಎಂದಿದ್ದಾರೆ. 2022,ಎಪ್ರಿಲ್ ನಲ್ಲಿ ಇಸ್ರೇಲಿ ಪಡೆಗಳು ಅಲ್-ಅಕ್ಸಾ ಮಸೀದಿಯ ಮೇಲೆ ದಾಳಿ ನಡೆಸಿದ್ದವು.
ಅಲ್-ಅಕ್ಸಾದ ವಿಮೋಚನೆಗೆ ನೆರವಾಗುವಂತೆ ಅರಬ್ ಮತ್ತು ಇಸ್ಲಾಮಿಕ್ ಜನತೆಯನ್ನು ಡೀಫ್ ಆಗ್ರಹಿಸಿದ್ದಾರೆ.
ನಿಮ್ಮ ಬಳಿ ಬಂದೂಕು ಇದ್ದರೆ ಅದನ್ನು ಹೊರತೆಗೆಯಿರಿ. ಇದು ಅದನ್ನು ಬಳಸುವ ಸಮಯವಾಗಿದೆ.ಟ್ರಕ್ ಗಳು,ಕಾರುಗಳಲ್ಲಿ ಹೊರಡಿ, ಇಂದು ಅತ್ಯುತ್ತಮ ಮತ್ತು ಅತ್ಯಂತ ಗೌರವಾನ್ವಿತ ಇತಿಹಾಸವು ಆರಂಭವಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಇಸ್ರೇಲಿನ ದಕ್ಷಿಣ ಮತ್ತು ಮಧ್ಯ ಭಾಗಗಳಾದ್ಯಂತ ರಾಕೆಟ್ ದಾಳಿಗಳು ವರದಿಯಾಗಿದ್ದು, ಪವಿತ್ರ ನಗರ ಜೆರುಸಲೇಂ ಮತ್ತು ದೇಶಾದ್ಯಂತ ಸೈರನ್ ಗಳು ಮೊಳಗುತ್ತಿವೆ. ಆಶ್ರಯ ತಾಣಗಳ ಸಮೀಪವಿರುವಂತೆ ನಾಗರಿಕರಿಗೆ ಮತ್ತು ಗಾಝಾ ಪಟ್ಟಿಯ ಸಮೀಪದಲ್ಲಿರುವವರಿಗೆ ಮನೆಗಳಲ್ಲಿಯೇ ಇರುವಂತೆ ಸರಕಾರವು ಸೂಚಿಸಿದೆ.
ಗಾಝಾ ಗಡಿ ಪ್ರದೇಶಗಳಲ್ಲಿಯ ನಿವಾಸಿಗಳು ತಮ್ಮ ಮನೆಗಳನ್ನು ಬಿಟ್ಟು ಓಡುತ್ತಿರುವ ದೃಶ್ಯಾವಳಿಗಳು ಆನ್ಲೈನ್ ನಲ್ಲಿ ಕಾಣಿಸಿಕೊಂಡಿವೆ. ನೂರಾರು ಪುರುಷರು ಮತ್ತು ಮಹಿಳೆಯರು ಬ್ಲಾಂಕೆಟ್ ಗಳು ಮತ್ತು ಆಹಾರ ಸಾಮಗ್ರಿಗಳನ್ನು ಹೊತ್ತುಕೊಂಡು ಇಸ್ರೇಲ್ ಗಡಿಯಿಂದ ದೂರ ಸಾಗುತ್ತಿರುವುದು ಕಂಡು ಬಂದಿದೆ.
2007ರಲ್ಲಿ ಹಮಾಸ್ ಗಾಝಾವನ್ನು ವಶಪಡಿಸಿಕೊಂಡ ಬಳಿಕ ಇಸ್ರೇಲ್ ಮತ್ತು ಫೆಲೆಸ್ತೀನಿಯರ ನಡುವೆ ಹಲವಾರು ಯುದ್ಧಗಳು ನಡೆದಿವೆ. ಇಸ್ರೇಲ್ ಗಾಝಾದ ಕಾರ್ಮಿಕರಿಗೆ ತನ್ನ ಗಡಿಗಳನ್ನು ಮುಚ್ಚಿದ ಬಳಿಕ ಶನಿವಾರದ ಬೆಳವಣಿಗೆ ನಡೆದಿದೆ. ಈ ವರ್ಷ ಈವರೆಗೆ ಸಂಘರ್ಷಗಳಲ್ಲಿ 247 ಫೆಲೆಸ್ತೀನಿಯರು,32 ಇಸ್ರೇಲಿಗಳು ಮತ್ತು ಇಬ್ಬರು ವಿದೇಶಿಯರು ಕೊಲ್ಲಲ್ಪಟ್ಟಿದ್ದಾರೆ. ಇವರಲ್ಲಿ ಹೋರಾಟಗಾರರು ಮತ್ತು ನಾಗರಿಕರು ಸೇರಿದ್ದಾರೆ.
ಆಕ್ರಮಣವನ್ನು ಅಂತ್ಯಗೊಳಿಸಲು ಜನರು ರೇಖೆಯೊಂದನ್ನು ಎಳೆಯಬೇಕಿದೆ ಎಂದು ಶುಕ್ರವಾರ ಘೋಷಿಸಿದ್ದ ಹಮಾಸ್,ಫೆಲೆಸ್ತೀನ್ ಭೂಮಿಯಾದ್ಯಂತ,ವಿಶೇಷವಾಗಿ ಜೆರುಸಲೇಮ್ನಲ್ಲಿಯ ಅಲ್-ಅಕ್ಸಾದ ಪವಿತ್ರ ಸ್ಥಳದಲ್ಲಿ ಅಪರಾಧಗಳನ್ನು ಎಸಗುವುದನ್ನು ಇಸ್ರೇಲ್ ಮುಂದುವರಿಸಿದೆ ಎಂದು ಹೇಳಿತ್ತು.
ಹಮಾಸ್ ನ ದಿಡೀರ್ ದಾಳಿಗೆ ವಿಶ್ವದ ಪ್ರತಿಕ್ರಿಯೆ
ಇಸ್ರೇಲ್ ಮತ್ತು ಹಮಾಸ್ ನಡುವಿನ ಉದ್ವಿಗ್ನತೆಯ ಉಲ್ಬಣದಿಂದ ಗಂಭೀರ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿರುವ ಈಜಿಪ್ಟ್,ಗರಿಷ್ಠ ಸಂಯಮವನ್ನು ಕಾಯ್ದುಕೊಳ್ಳುವಂತೆ ಮತ್ತು ನಾಗರಿಕರನ್ನು ಇನ್ನಷ್ಟು ಅಪಾಯಕ್ಕೆ ಒಡ್ಡುವುದನ್ನು ತಪ್ಪಿಸುವಂತೆ ಕರೆ ನೀಡಿದೆ.
ಇಸ್ರೇಲ್ ವಿರುದ್ಧ ದಾಳಿಯನ್ನು ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ಖಂಡಿಸಿದ್ದಾರೆ.
ದಾಳಿಯನ್ನು ‘ಒಪ್ಪಿಕೊಳ್ಳಲು ಸಾಧ್ಯವಿಲ್ಲದ ಭಯೋತ್ಪಾದಕ ದಾಳಿ ’ಎಂದು ಇಸ್ರೇಲ್ನಲ್ಲಿರುವ ಫ್ರೆಂಚ್ ರಾಯಭಾರ ಕಚೇರಿಯು ಬಣ್ಣಿಸಿದೆ.
ಹಮಾಸ್ನಿಂದ ರಾಕೆಟ್ ದಾಳಿಯನ್ನು ಖಂಡಿಸಿರುವ ಗ್ರೀಸ್,ತಾನು ಇಸ್ರೇಲ್ ಪರವಾಗಿದ್ದೇನೆ ಮತ್ತು ಹಿಂಸಾಚಾರದ ಅಸ್ವೀಕಾರಾರ್ಹ ಉಲ್ಬಣದಿಂದ ತೀವ್ರ ಕಳವಳಗೊಂಡಿದ್ದೇನೆ ಎಂದು ಹೇಳಿದೆ.
ಹಮಾಸ್ ದಾಳಿಯಿಂದ ತನ್ನನ್ನು ರಕ್ಷಿಸಿಕೊಳ್ಳುವ ಇಸ್ರೇಲಿನ ಹಕ್ಕನ್ನು ಇಟಲಿ ಬೆಂಬಲಿಸಿದೆ.
ಇಸ್ರೇಲಿ ಪ್ರಜೆಗಳ ವಿರುದ್ಧ ಬೃಹತ್ ರಾಕೆಟ್ ದಾಳಿಗಳನ್ನು ನಮ್ಮ ದೇಶವು ಖಂಡಿಸುತ್ತದೆ. ಹಿಂಸೆ ಮತ್ತು ಭಯೋತ್ಪಾದನೆ ನರಳುವಿಕೆಯನ್ನು ಶಾಶ್ವತವಾಗಿಸುತ್ತದೆ ಮತ್ತು ಮಾತುಕತೆಯ ಮಾರ್ಗಕ್ಕೆ ಅಡ್ಡಿಯನ್ನುಂಟು ಮಾಡುತ್ತದೆ. ನಮ್ಮ ಚಿಂತನೆಗಳು ಎಲ್ಲ ಸಂತ್ರಸ್ತರೊಂದಿಗಿವೆ, ನಾವು ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದ್ದೇವೆ.
*ಹದ್ಝಾ ಲಹ್ಬಿಬ್,ಬೆಲ್ಜಿಯಂ ವಿದೇಶಾಂಗ ಸಚಿವ
ಇಸ್ರೇಲ್ ವಿರುದ್ಧ ಹಮಾಸ್ ದಾಳಿಯನ್ನು ನಾವು ಸ್ಪಷ್ಟವಾಗಿ ಖಂಡಿಸುತ್ತೇವೆ. ಇಂತಹ ಹೇಯ ದಾಳಿಗಳ ವಿರುದ್ಧ ತನ್ನನ್ನು ರಕ್ಷಿಸಿಕೊಳ್ಳುವ ಹಕ್ಕು ಇಸ್ರೇಲ್ಗೆ ಇದೆ.
*ಅರ್ಸುಲಾ ವಾನ್ಐ, ರೋಪ್ಯ ಆಯೋಗದ ಅಧ್ಯಕ್ಷೆ
ಗಾಝಾದಿಂದ ಇಸ್ರೇಲ್ ವಿರುದ್ಧ ಭಯೋತ್ಪಾದಕ ದಾಳಿಯನ್ನು ನಾವು ಬಲವಾಗಿ ಖಂಡಿಸುತ್ತೇವೆ. ಹಿಂಸಾಚಾರವು ತೀವ್ರಗೊಳ್ಳಲು ಹಮಾಸ್ ತನ್ನ ಕೊಡುಗೆಯನ್ನು ಸಲ್ಲಿಸುತ್ತಿದೆ. ಅಮಾಯಕ ಜನರನ್ನು ಗುರಿಯಾಗಿಸಿಕೊಂಡಿರುವ ಹಿಂಸೆ ಮತ್ತು ರಾಕೆಟ್ ದಾಳಿಗಳು ತಕ್ಷಣ ನಿಲ್ಲಬೇಕು.
*ಅನ್ನಾಲಿನಾ ಬೇರಬಾಕ್ಜ, ರ್ಮನ್ ವಿದೇಶಾಂಗ ಸಚಿವೆ
ಗಾಝಾದಲ್ಲಿಯ ಸ್ಥಿತಿಯನ್ನು ನಾವು ನಿಕಟವಾಗಿ ಗಮನಿಸುತ್ತಿದ್ದೇವೆ ಮತ್ತು ಫೆಲೆಸ್ತೀನಿ ನಾಯಕತ್ವದೊಂದಿಗೆ ನೇರ ಸಂಪರ್ಕದಲ್ಲಿದ್ದೇವೆ. ಈ ದಾಳಿಗಳು ಇಸ್ರೇಲಿನ ನಿರಂತರ ಆಕ್ರಮಣಕ್ಕೆ ನಿರ್ಣಾಯಕ ಉತ್ತರವಾಗಿದೆ ಮತ್ತು ಇಸ್ರೇಲ್ ನೊಂದಿಗೆ ಸಂಬಂಧಗಳನ್ನು ಸಹಜಗೊಳಿಸಲು ಪ್ರಯತ್ನಿಸುತ್ತಿರುವವರಿಗೆ ಸಂದೇಶವಾಗಿದೆ.
*ಹಿಝ್ಬುಲ್ಲಾ, ಲೆಬನಾನ್ ಸಶಸ್ತ್ರ ಗುಂಪು
ನಾವು ಫೆಲೆಸ್ತೀನಿಯರ ದಾಳಿಯನ್ನು ಬೆಂಬಲಿಸುತ್ತೇವೆ, ಫೆಲೆಸ್ತೀನಿ ಹೋರಾಟಗಾರರಿಗೆ ನಮ್ಮ ಅಭಿನಂದನೆಗಳು. ಫೆಲೆಸ್ತೀನ್ ಮತ್ತು ಜೆರುಸಲೇಂ ವಿಮೋಚನೆಯವರೆಗೂ ನಾವು ಫೆಲಸ್ತೀನಿಯನ್ ಹೋರಾಟಗಾರರೊಂದಿಗೆ ಇದ್ದೇವೆ.
ಭಾರತೀಯರಿಗೆ ಎಚ್ಚರಿಕೆ
ಇಸ್ರೇಲ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಜಾಗರೂಕರಾಗಿರುವಂತೆ ಮತ್ತು ಸ್ಥಳೀಯ ಅಧಿಕಾರಿಗಳು ತಿಳಿಸಿರುವ ಸುರಕ್ಷತಾ ಶಿಷ್ಟಾಚಾರಗಳನ್ನು ಪಾಲಿಸುವಂತೆ ದೇಶದಲ್ಲಿರುವ ತನ್ನ ಪ್ರಜೆಗಳಿಗೆ ಸೂಚಿಸಿದೆ. ಅನಗತ್ಯ ಚಲನವಲನಗಳನ್ನು ತಪ್ಪಿಸಿ ಮತ್ತು ಸುರಕ್ಷಿತ ಆಶ್ರಯಗಳ ಸಮೀಪದಲ್ಲಿರಿ ಎಂದೂ ಅದು ತಿಳಿಸಿದೆ.