ಭಾರತಕ್ಕೆ ಆಗಮಿಸುತ್ತಿದ್ದ ಹಡಗಿನ ಮೇಲೆ ಕೆಂಪು ಸಮುದ್ರದಲ್ಲಿ ಹೌದಿ ದಾಳಿ
ದುಬೈ: ಭಾರತಕ್ಕೆ ಆಗಮಿಸುತ್ತಿದ್ದ ಅಮೆರಿಕ ಮತ್ತು ಬ್ರಿಟನ್ ನ ಎರಡು ಹಡಗುಗಳ ಮೇಲೆ ಯೆಮನ್ ನ ಹೌದಿ ಬಂಡುಕೋರರು ಮಂಗಳವಾರ ಕೆಂಪು ಸಮುದ್ರದಲ್ಲಿ ದಾಳಿ ನಡೆಸಿದ್ದಾರೆ. ಜಾಗತಿಕ ಶಿಪ್ಪಿಂಗ್ ವ್ಯವಹಾರವನ್ನು ವ್ಯತ್ಯಯಗೊಳಿಸುವ ಇಂಥ ಹಲವು ದಾಳಿಗಳು ನಡೆಯುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ.
ಇರಾನ್ ಬೆಂಬಲಿತ ಹೌದಿ ಬಂಡುಕೋರರು, ಈ ಯುದ್ಧಪೀಡಿತ ದೇಶವನ್ನು ಬಹುತೇಕ ನಿಯಂತ್ರಿಸುತ್ತಿದ್ದು, ಇಸ್ರೇಲ್-ಹಮಾಸ್ ಯುದ್ಧದಲ್ಲಿ ಫೆಲಸ್ತೀನ್ ಅನ್ನು ಬೆಂಬಲಿಸುವ ಅಭಿಯಾನದ ಅಂಗವಾಗಿ ಶಿಪ್ಪಿಂಗ್ ಗೆ ಕಿರುಕುಳ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ಮಂಗಳವಾರ ನಡೆದ ಮೊದಲ ದಾಳಿ ಅಮೆರಿಕನ್ ಹಡಗು ಸ್ಟಾರ್ ನಾಸಿಯಾವನ್ನು ಗುರಿ ಮಾಡಿದ್ದರೆ, ಬ್ರಿಟನ್ ನ ಮಾರ್ನಿಂಗ್ ಟೈಡ್ ಹಡಗಿನ ಮೇಲೆ ಎರಡನೇ ದಾಳಿ ನಡೆದಿದೆ ಎಂದು ಹೌದಿ ವಕ್ತಾರ ಯಹ್ಯಾ ಸರೀ ಹೇಳಿದ್ದಾರೆ. ಸ್ವ-ರಕ್ಷಣೆ ಕಾರ್ಯತಂತ್ರದ ಅಂಗವಾಗಿ ಅಮೆರಿಕ ಹಾಗೂ ಬ್ರಿಟನ್ ನೆಲೆಗಳ ಮೇಲೆ ಇನ್ನಷ್ಟು ಸೇನಾ ಕಾರ್ಯಾಚರಣೆಗಳನ್ನು ನಡೆಸಲಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಇದಕ್ಕೂ ಮುನ್ನ ಹೇಳಿಕೆ ನೀಡಿರುವ ಭದ್ರತಾ ಸಂಸ್ಥೆಯಾದ ಅಂಬ್ರೇ, ಬ್ರಿಟಿಷ್ ಒಡೆತನದ ಕಾರ್ಗೊ ಹಡಗಿನ ಮೇಲೆ ಯೆಮನ್ ದಾಳಿ ನಡೆಸಿದೆ ಎಂದು ಪ್ರಕಟಿಸಿತ್ತು. ಆದರೆ ಆ ಬಳಿಕ ಬಾರ್ಬಡೋಸ್ ಧ್ವಜ ಹೊಂದಿದ್ದ ನೌಕೆಯನ್ನು ಗುರಿಮಾಡಲಾಗಿದೆ ಎಂದು ಹೇಳಿದೆ. ಹಡಗಿನ ಬಳಿ ಸಣ್ಣ ನಾವೆಯಿಂದ ಈ ದಾಳಿ ನಡೆಸಲಾಗಿದೆ. ಆದರೆ ಈ ಪ್ರಾಜೆಕ್ಟೈಲ್ ಹಡಗಿನ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಪಕ್ಕದಲ್ಲಿ ಸ್ಫೋಟಗೊಂಡು ಸಣ್ಣ ಪ್ರಮಾಣದ ಹಾನಿಯುಂಟಾಗಿದ್ದು, ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಬ್ರಿಟನ್ ಹೇಳಿದೆ.