ಇಸ್ರೇಲ್ ಮೇಲೆ ಹೌದಿಗಳ ಕ್ಷಿಪಣಿ ದಾಳಿ : ವರದಿ
Update: 2024-11-11 16:34 GMT
ಸನಾ : ಇಸ್ರೇಲ್ ನ ಜೆರುಸಲೇಂ ನಗರದ ಬಳಿಯ ಮಿಲಿಟರಿ ನೆಲೆಯನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆಸಿರುವುದಾಗಿ ಯೆಮನ್ ನ ಹೌದಿ ಸಶಸ್ತ್ರ ಹೋರಾಟಗಾರರ ಗುಂಪು ಹೇಳಿದೆ.
ಟೆಲ್ ಅವೀವ್ ಬಳಿಯ ಬಂದರು ನಗರ ಜಾಫಾದ ಆಗ್ನೇಯದಲ್ಲಿರುವ ನಹಾಲ್ ಸೊರೆಕ್ ಮಿಲಿಟರಿ ನೆಲೆಯನ್ನು ಗುರಿಯಾಗಿಸಿಕೊಂಡು ನಡೆಸಿದ ಮಿಲಿಟರಿ ಕಾರ್ಯಾಚರಣೆ ಯಶಸ್ವಿಯಾಗಿದೆ. ಮಿಲಿಟರಿ ನೆಲೆಗೆ ಹಾನಿಯಾಗಿದ್ದು ಬೆಂಕಿ ಕಾಣಿಸಿಕೊಂಡಿದೆ ಎಂದು ಹೌದಿಗಳು ಹೇಳಿದ್ದಾರೆ. ಯೆಮನ್ ಕಡೆಯಿಂದ ಇಸ್ರೇಲ್ ನತ್ತ ಕ್ಷಿಪಣಿ ಧಾವಿಸಿ ಬರುತ್ತಿದ್ದಂತೆಯೇ ಜೆರುಸಲೇಂ ವಲಯದಲ್ಲಿ ಸೈರನ್ ಮೊಳಗಿಸಲಾಗಿದೆ. ತಕ್ಷಣ ನಮ್ಮ ವಾಯುರಕ್ಷಣಾ ವ್ಯವಸ್ಥೆಯು ಕ್ಷಿಪಣಿಯನ್ನು ತುಂಡರಿಸಿದ್ದು ಕ್ಷಿಪಣಿಯ ಅವಶೇಷಗಳು ಬಿದ್ದು ಬೆಂಕಿ ಹರಡಿದೆ. ಬೆಂಕಿಯನ್ನು ನಿಯಂತ್ರಿಸಲಾಗಿದ್ದು ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ.