ಪಕ್ಷ ಅಧಿಕಾರಕ್ಕೆ ಬಂದರೆ ನವಾಝ್ ಷರೀಫ್ ಪ್ರಧಾನಿ: ಪಾಕ್ ಪ್ರಧಾನಿ ಶಹಬಾಝ್ ಷರೀಫ್
ಇಸ್ಲಮಾಬಾದ್: ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಝ್(ಪಿಎಂಎಲ್-ಎನ್) ಪಕ್ಷ ಅಧಿಕಾರಕ್ಕೆ ಬಂದರೆ ಪಕ್ಷದ ಮುಖಂಡ ನವಾಝ್ ಷರೀಫ್ ಮುಂದಿನ ಪ್ರಧಾನಿಯಾಗಲಿದ್ದಾರೆ ಎಂದು ಪಾಕಿಸ್ತಾನದ ಪ್ರಧಾನಿ ಶಹಬಾಝ್ ಷರೀಫ್ ಹೇಳಿದ್ದಾರೆ.
ಲಂಡನ್‍ನಲ್ಲಿ ವೈದ್ಯಕೀಯ ಕಾರಣಕ್ಕೆ ನೆಲೆಸಿರುವ ಷರೀಫ್ ಮುಂದಿನ ಕೆಲದಿನಗಳಲ್ಲಿ ಪಾಕಿಸ್ತಾನಕ್ಕೆ ಮರಳಲಿದ್ದು ದೇಶದ ಕಾನೂನನ್ನು ಎದುರಿಸಲಿದ್ದಾರೆ ಎಂದು ಅವರ ಸಹೋದರ ಷಹಬಾಝ್ ಷರೀಫ್ ಹೇಳಿದ್ದಾರೆ. ಮೂರು ಬಾರಿ ಪ್ರಧಾನಿಯಾಗಿದ್ದ ಷರೀಫ್‍ರನ್ನು 2017ರಲ್ಲಿ ಸುಪ್ರೀಂಕೋರ್ಟ್ ಅನರ್ಹಗೊಳಿಸಿತ್ತು.
ಪನಾಮಾ ಪೇಪರ್ಸ್ ಪ್ರಕರಣದಲ್ಲಿ 2018ರಲ್ಲಿ ಅವರನ್ನು ಜೀವಮಾನವಿಡೀ ಸಾರ್ವಜನಿಕ ಹುದ್ದೆ ನಿರ್ವಹಣೆಯಿಂದ ಅನರ್ಹಗೊಳಿಸಲಾಗಿದೆ. ಅಲ್‍ಅಜೀಝಿಯ ಮಿಲ್ಸ್ ಭ್ರಷ್ಟಾಚಾರ ಪ್ರಕರಣದಲ್ಲಿ ಷರೀಫ್‍ಗೆ 7 ವರ್ಷ ಜೈಲುಶಿಕ್ಷೆ ವಿಧಿಸಲಾಗಿತ್ತು. ಆದರೆ ಲಂಡನ್‍ನಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಲು ಅವರಿಗೆ ಲಾಹೋರ್ ಹೈಕೋರ್ಟ್ 4 ವಾರ ಜಾಮೀನು ಮಂಜೂರುಗೊಳಿಸಿತ್ತು.
ಈ ಮಧ್ಯೆ, ಹಾಲಿ ರಾಷ್ಟ್ರೀಯ ಅಸೆಂಬ್ಲಿಯ ಅವಧಿ ಆಗಸ್ಟ್ 12ರ ಮಧ್ಯರಾತ್ರಿಗೆ ಅಂತ್ಯಗೊಳ್ಳಲಿದ್ದು ಅದಕ್ಕೂ ಕೆಲ ದಿನಗಳ ಮೊದಲೇ ಸಂಸತ್ತನ್ನು ವಿಸರ್ಜಿಸುವ ಅಧಿಸೂಚನೆಯನ್ನು ಅಧ್ಯಕ್ಷ ಆರಿಫ್ ಆಲ್ವಿಗೆ ರವಾನಿಸಲಾಗುವುದು. ಸಾರ್ವತ್ರಿಕ ಚುನಾವಣೆಗೆ ಮಿತ್ರಪಕ್ಷಗಳೊಂದಿಗೆ ಸೀಟು ಹೊಂದಾಣಿಕೆ ಮಾಡಿಕೊಳ್ಳಲಾಗುವುದು ಎಂದು ಪಿಎಂಎಲ್-ಎನ್ ಅಧ್ಯಕ್ಷರೂ ಆಗಿರುವ ಶಹಬಾಝ್ ಷರೀಫ್ ಹೇಳಿದ್ದಾರೆ.