ಅಮೆರಿಕನ್ನರ ನೇತೃತ್ವದ ಮೇಲೆ ಭಾರತಕ್ಕೆ ವಿಶ್ವಾಸವಿಲ್ಲ: ನಿಕ್ಕಿ ಹ್ಯಾಲೆ

Update: 2024-02-08 16:51 GMT

ವಾಷಿಂಗ್ಟನ್ : ಭಾರತವು ಅಮೆರಿಕದ ಜತೆಗೆ ಪಾಲುದಾರರಾಗಲು ಬಯಸುತ್ತದೆ. ಆದರೆ ಈಗಿನ ಸಂದರ್ಭದಲ್ಲಿ ಅವರಿಗೆ ಅಮೆರಿಕನ್ನರ ನೇತೃತ್ವದ ಮೇಲೆ ವಿಶ್ವಾಸವಿಲ್ಲ. ಹಾಲಿ ಜಾಗತಿಕ ಪರಿಸ್ಥಿತಿಯಲ್ಲಿ ಅತ್ಯಂತ ಜಾಣ್ಮೆಯ ನಡೆ ಇರಿಸುತ್ತಿರುವ ಭಾರತ ರಶ್ಯದೊಂದಿಗೆ ನಿಕಟವಾಗುತ್ತಿದೆ' ಎಂದು ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಅಭ್ಯರ್ಥಿಯ ರೇಸ್‍ನಲ್ಲಿರುವ ನಿಕ್ಕಿ ಹ್ಯಾಲೆ ಅಭಿಪ್ರಾಯ ಪಟ್ಟಿದ್ದಾರೆ.

ಈಗಿನ ಅಮೆರಿಕ ದುರ್ಬಲವೆಂದು ಭಾರತ ಭಾವಿಸಿದೆ. ನಾನು ಭಾರತದೊಂದಿಗೆ, ಪ್ರಧಾನಿ ಮೋದಿಯ ಜತೆ ಹಲವು ಬಾರಿ ಮಾತನಾಡಿದ್ದೇನೆ. ಅವರು ಅಮೆರಿಕದ ಪಾಲುಗಾರರಾಗಲು ಬಯಸಿದ್ದಾರೆ. ಆದರೆ ಇಲ್ಲಿರುವ ಸಮಸ್ಯೆಯೆಂದರೆ ಅವರು ಅಮೆರಿಕದ ನೇತೃತ್ವವನ್ನು ಇಚ್ಚಿಸುವುದಿಲ್ಲ. ತಮ್ಮ ಬಹುತೇಕ ಮಿಲಿಟರಿ ಸಾಧನಗಳನ್ನು ರಶ್ಯದಿಂದ ಪಡೆಯುತ್ತಿರುವ ಕಾರಣ ಅವರು ಈಗ ರಶ್ಯಕ್ಕೆ ನಿಕಟವಾಗಿದ್ದಾರೆ ಎಂದವರು ಹೇಳಿದ್ದಾರೆ.

ನಾವು ನಮ್ಮ ದೌರ್ಬಲ್ಯವನ್ನು ಮೆಟ್ಟಿನಿಂತು, ಮರಳಿನಲ್ಲಿ ನಮ್ಮ ತಲೆಯನ್ನು ಅಡಗಿಸಿಡುವುದನ್ನು ನಿಲ್ಲಿಸಿ ಮತ್ತೆ ನೇತೃತ್ವ ವಹಿಸುವುದನ್ನು ನಮ್ಮ ಎಲ್ಲಾ ಮಿತ್ರರಾದ- ಭಾರತ, ಆಸ್ಟ್ರೇಲಿಯಾ, ನ್ಯೂಝಿಲ್ಯಾಂಡ್, ಇಸ್ರೇಲ್, ಜಪಾನ್, ದಕ್ಷಿಣ ಕೊರಿಯಾ ಮುಂತಾದ ದೇಶಗಳು ನಿರೀಕ್ಷಿಸುತ್ತಿವೆ. ಇದು ಸಾಧ್ಯವಾದರೆ ಈ ಎಲ್ಲಾ ದೇಶಗಳು ಚೀನಾವನ್ನು ಅವಲಂಬಿಸುವುದು ಕ್ರಮೇಣ ಕಡಿಮೆಯಾಗಲಿದೆ. ಅಮೆರಿಕ ಹೊಸ ಮೈತ್ರಿಯನ್ನು ರಚಿಸಲು ಮುಂದಾಗಬೇಕಿದೆ. ಚೀನಾಗೆ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದರೂ ಅವರು ಹಲವು. ವರ್ಷಗಳಿಂದ ಅಮೆರಿಕದೊಂದಿಗೆ ಯುದ್ಧಕ್ಕೆ ಸಿದ್ಧತೆ ನಡೆಸುವುದರಲ್ಲಿ ನಿರತರಾಗಿದ್ದಾರೆ. ಇದು ಅವರು ಮಾಡುವ ಬಹುದೊಡ್ಡ ಪ್ರಮಾದವಾಗಿದೆ' ಎಂದು ನಿಕ್ಕಿ ಹ್ಯಾಲೆ ಹೇಳಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News