ಭಾರತದೊಂದಿಗಿನ ಸಂಬಂಧ ಮುಖ್ಯ, ಆದರೆ ನಿಜಾರ್ ಹತ್ಯೆಯ ತನಿಖೆಯಾಗಬೇಕು ; ಕೆನಡಾ ರಕ್ಷಣಾ ಸಚಿವ
ಒಟ್ಟಾವ: ಭಾರತದ ಜತೆಗಿನ ಸಂಬಂಧ ಮುಖ್ಯವಾಗಿದೆ, ಆದರೆ ಖಾಲಿಸ್ತಾನಿ ಉಗ್ರವಾದಿ ಹರ್ದೀಪ್ ಸಿಂಗ್ ನಿಜ್ಜಾರ್ ನ ಹತ್ಯೆಯ ಕುರಿತ ಆರೋಪದ ಬಗ್ಗೆ ತನಿಖೆಯಾಗಬೇಕು ಎಂದು ಕೆನಡಾದ ರಕ್ಷಣಾ ಸಚಿವ ಬಿಲ್ ಬ್ಲೇರ್ ಪ್ರತಿಪಾದಿಸಿದ್ದಾರೆ.
`ಇದು ಭಾರತದೊಂದಿಗಿನ ನಮ್ಮ ಸಂಬಂಧಕ್ಕೆ ಸಂಬಂಧಿಸಿದಂತೆ ಸವಾಲಿನ ಸಮಸ್ಯೆಯಾಗಿರಬಹುದು ಎಂಬುದು ನಮಗೆ ತಿಳಿದಿದೆ. ಆದರೆ ಇದೇ ವೇಳೆ, ನಾವು ಸಂಪೂರ್ಣ ತನಿಖೆಯನ್ನು ನಡೆಸುತ್ತೇವೆ ಮತ್ತು ಸತ್ಯವನ್ನು ಹೊರಗೆಳೆಯುತ್ತೇವೆ ಎಂದು ಖಚಿತಪಡಿಸುವ ಜವಾಬ್ದಾರಿಯನ್ನೂ ಹೊಂದಿದ್ದೇವೆ. ಆರೋಪಗಳು ನಿಜವೆಂದು ಸಾಬೀತಾದರೆ, ನಮ್ಮ ಸಾರ್ವಭೌಮತ್ವದ ಉಲ್ಲಂಘನೆಗೆ ಸಂಬಂಧಿಸಿದ ಅತ್ಯಂತ ಕಳವಳದ ಪ್ರಕರಣವಾಗಲಿದೆ' ಎಂದು ರಕ್ಷಣಾ ಸಚಿವರನ್ನು ಉಲ್ಲೇಖಿಸಿ `ಗ್ಲೋಬಲ್ ನ್ಯೂಸ್' ವರದಿ ಮಾಡಿದೆ.
ಖಾಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯ ಹಿಂದೆ ಭಾರತ ಸರಕಾರದ ಏಜೆಂಟರ ಕೈವಾಡವಿದೆ ಎಂದು ಕಳೆದ ವಾರ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ನೇರ ಆರೋಪ ಮಾಡಿದ್ದರು. ಆದರೆ ಭಾರತ ಇದನ್ನು ಸ್ಪಷ್ಟವಾಗಿ ನಿರಾಕರಿಸಿದೆ.