ಭಾರತ-ಬ್ರೂನೈ ನಡುವೆ ಶೀಘ್ರ ನೇರ ವಿಮಾನಯಾನ | ಪ್ರಧಾನಿ ನರೇಂದ್ರ ಮೋದಿ ಘೋಷಣೆ
ಬಂದರ್ ಸೆರಿ ಬೇಗವಾನ್ : ಭಾರತ ಮತ್ತು ಬ್ರೂನೈ ನಡುವೆ ಶೀಘ್ರವೇ ನೇರ ವಿಮಾನಯಾನ ಸೇವೆ ಆರಂಭಗೊಳ್ಳಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಘೋಷಿಸಿದ್ದಾರೆ.
ಬ್ರೂನೈಯ ಸುಲ್ತಾನ್ ಹಾಜಿ ಹಸನಲ್ ಬೊಲ್ಕಿಯಾ ಮತ್ತು ಪ್ರಧಾನಿ ಮೋದಿ ವಿಶಾಲ ವ್ಯಾಪ್ತಿಯ ದ್ವಿಪಕ್ಷೀಯ ಸಭೆ ನಡೆಸಿದರು. ಈ ಸಂದರ್ಭ ವ್ಯಾಪಾರ ಸಂಬಂಧಗಳು, ವಾಣಿಜ್ಯ ಸಂಪರ್ಕಗಳು ಮತ್ತು ಜನರಿಂದ ಜನರ ವಿನಿಮಯದ ಕುರಿತು ಚರ್ಚೆ ನಡೆಯಿತು.
ನಮ್ಮ ಶ್ರೇಷ್ಟ ಸಂಸ್ಕøತಿಯ ಸಂಪ್ರದಾಯವು ಉಭಯ ದೇಶಗಳ ನಡುವಿನ ಸ್ನೇಹದ ಆಧಾರವಾಗಿದೆ. ಎರಡೂ ದೇಶಗಳ ನಡುವೆ ಶತಮಾನಗಳ ಹಿಂದಿನಿಂದಲೂ ಸ್ನೇಹ ಸಂಬಂಧವಿದೆ. ಭಾರತದ `ಆ್ಯಕ್ಟ್ ಈಸ್ಟ್' ನೀತಿ ಮತ್ತು ಇಂಡೊ-ಪೆಸಿಫಿಕ್ ದೃಷ್ಟಿಕೋನದಲ್ಲಿ ಬ್ರೂನೈ ಪ್ರಮುಖ ಪಾಲುದಾರನಾಗಿರುವುದು ನಮಗೆ ಉಜ್ವಲ ಭವಿಷ್ಯದ ಭರವಸೆಯಾಗಿದೆ. ಸುಲ್ತಾನ್ ಹಾಜಿ ಹಸನಲ್ ಬೊಲ್ಕಿಯಾ ಅವರ ಆಡಳಿತದಲ್ಲಿ ಭಾರತ ಮತ್ತು ಬ್ರೂನೈ ಗಮನಾರ್ಹ ಅಭಿವೃದ್ಧಿಯನ್ನು ಸಾಧಿಸಿವೆ ಮತ್ತು ಎರಡು ರಾಷ್ಟ್ರಗಳು ಆಳವಾದ ಐತಿಹಾಸಿಕ ಮತ್ತು ಸಾಂಸ್ಕøತಿಕ ಸ್ನೇಹ ಸಂಬಂಧವನ್ನು ಹೊಂದಿವೆ' ಎಂದು ಮೋದಿ ಹೇಳಿದ್ದಾರೆ.
ರಕ್ಷಣೆ, ವ್ಯಾಪಾರ ಮತ್ತು ಹೂಡಿಕೆ, ಆಹಾರ ಭದ್ರತೆ, ಶಿಕ್ಷಣ, ಇಂಧನ, ಬಾಹ್ಯಾಕಾಶ ತಂತ್ರಜ್ಞಾನ, ಆರೋಗ್ಯ, ಸಾಮಥ್ರ್ಯ ವೃದ್ಧಿ, ಸಂಸ್ಕøತಿ ಮುಂತಾದ ವಿವಿಧ ವಿಷಯಗಳ ಬಗ್ಗೆ ಉಭಯ ಮುಖಂಡರು ಚರ್ಚೆ ನಡೆಸಿದರು. ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ, ಹಣಕಾಸು ತಂತ್ರಜ್ಞಾನ, ಸೈಬರ್ ಭದ್ರತೆ, ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು ಮತ್ತು ನವೀಕರಿಸಬಹುದಾದ ಇಂಧನ ಮುಂತಾದ ಕ್ಷೇತ್ರಗಳಲ್ಲಿ ಸಹಯೋಗವನ್ನು ಮುಂದುವರಿಸಲು ಒಪ್ಪಿಕೊಂಡರು. ಪ್ರಾದೇಶಿಕ ಮತ್ತು ಜಾಗತಿಕ ಸಮಸ್ಯೆಗಳ ಬಗ್ಗೆ ಅಭಿಪ್ರಾಯ ವಿನಿಮಯ ಮಾಡಿಕೊಂಡರು ಮತ್ತು ಎಲ್ಲಾ ರೀತಿಯ ಭಯೋತ್ಪಾದನೆಯನ್ನು ಖಂಡಿಸಿದರು ಎಂದು ಮೂಲಗಳು ಹೇಳಿವೆ.
ಭಾರತವು ವಿಸ್ತರಣಾವಾದವನ್ನು ಬೆಂಬಲಿಸುವುದಿಲ್ಲ, ಅಭಿವೃದ್ಧಿಯನ್ನು ಬೆಂಬಲಿಸುತ್ತದೆ ಎಂದ ಮೋದಿ, ನೌಕಾಯಾನ ಮತ್ತು ವಿಮಾನಯಾನ ಸ್ವಾತಂತ್ರ್ಯವನ್ನು ಗೌರವಿಸುವ ಅಗತ್ಯವನ್ನು ಒತ್ತಿಹೇಳಿದರು.
`ಉಭಯ ಮುಖಂಡರು ಶಾಂತಿ, ಸ್ಥಿರತೆ, ಕಡಲ ಸುರಕ್ಷತೆ ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳಲು ಮತ್ತು ಉತ್ತೇಜಿಸಲು, ನೌಕಾಯಾನದ ಸ್ವಾತಂತ್ರ್ಯವನ್ನು ಗೌರವಿಸಲು, ಅಡೆತಡೆಯಿಲ್ಲದ ಕಾನೂನುಬದ್ದ ವಾಣಿಜ್ಯ ವ್ಯವಹಾರಕ್ಕೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ಪ್ರದೇಶದ ಶಾಂತಿ, ಸ್ಥಿರತೆ, ಭದ್ರತೆ ಮತ್ತು ಸಮೃದ್ಧಿಗೆ ತಮ್ಮ ದೃಢವಾದ ಬದ್ಧತೆಯನ್ನು ಪುನರುಚ್ಚರಿಸಿದರು ಮತ್ತು ಅಂತರಾಷ್ಟ್ರೀಯ ಕಾನೂನು ಮತ್ತು ವಿಶ್ವಸಂಸ್ಥೆಯ ಚಾರ್ಟರ್(ಸನದು)ನಲ್ಲಿ ವಿವರಿಸಿರುವ ತತ್ವಗಳಿಗೆ ಬದ್ಧವಾಗಿರುವುದರ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು' ಎಂದು ದ್ವಿಪಕ್ಷೀಯ ಮಾತುಕತೆಯ ಬಳಿಕ ಹೊರಡಿಸಿದ ಜಂಟಿ ಹೇಳಿಕೆ ತಿಳಿಸಿದೆ.
►ಸಿಂಗಾಪುರಕ್ಕೆ ಆಗಮನ
ಎರಡು ದಿನಗಳ ಭೇಟಿಗಾಗಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ಸಿಂಗಾಪುರಕ್ಕೆ ಆಗಮಿಸಿದ್ದು ಭಾರತ-ಸಿಂಗಾಪುರ ದ್ವಿಪಕ್ಷೀಯ ಸಂಬಂಧಗಳ ಸಬಲೀಕರಣ, ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸುವುದು, ಮತ್ತು ಸಿಂಗಾಪುರದಿಂದ ಹೆಚ್ಚಿನ ಹೂಡಿಕೆಯನ್ನು ಆಕರ್ಷಿಸುವತ್ತ ಗಮನ ಹರಿಸಲಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿಯನ್ನು ಸಿಂಗಾಪುರದ ಗೃಹಸಚಿವರು ಸ್ವಾಗತಿಸಿದರು. ಸಿಂಗಾಪುರದ ಪ್ರಧಾನಿ ಲಾರೆನ್ಸ್ ವಾಂಗ್ ಆಹ್ವಾನದ ಮೇರೆಗೆ ಆಗಮಿಸಿರುವ ಮೋದಿ ಗುರುವಾರ ಸಿಂಗಾಪುರ ನಾಯಕತ್ವದ ಮೂರು ತಲೆಮಾರುಗಳ ಜತೆ ಸಂವಾದ ನಡೆಸಲಿದ್ದಾರೆ. ಬಳಿಕ ಸಿಂಗಾಪುರದ ಪ್ರಧಾನಿ ಹಾಗೂ ಅಧ್ಯಕ್ಷರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.
ವಿದೇಶಾಂಗ ಸಚಿವ ಎಸ್. ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸೇರಿದಂತೆ ಉನ್ನತ ಮಟ್ಟದ ನಿಯೋಗ ಪ್ರಧಾನಿಯ ಜತೆಗಿದೆ.