ಕೈಗಾರಿಕೆ, ತಂತ್ರಜ್ಞಾನದಲ್ಲಿ ಸಹಕಾರ ವೃದ್ಧಿಗೆ ಭಾರತ-ಯುಎಇ ಒಪ್ಪಂದ

Update: 2023-10-05 17:17 GMT

ಪಿಯೂಷ್ ಗೋಯಲ್ , ಸುಲ್ತಾನ್ ಅಲ್ ಜಬೆರ್ | Photo: ANI

ಅಬುಧಾಬಿ: ಕೈಗಾರಿಕೆಗಳು ಮತ್ತು ಸುಧಾರಿತ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸುವ ಒಪ್ಪಂದಕ್ಕೆ ಭಾರತ ಮತ್ತು ಯುಎಇ ಗುರುವಾರ ಸಹಿ ಹಾಕಿವೆ.

ಜಂಟಿ ನಿಧಿಗಳು ಮತ್ತು ಪರಸ್ಪರ ಪ್ರಯತ್ನಗಳಿಂದ ಪ್ರಯೋಜನ ಪಡೆಯುವ ಮೂಲಕ ಹೂಡಿಕೆಗಳು, ತಂತ್ರಜ್ಞಾನ ವರ್ಗಾವಣೆ ಮತ್ತು ಕೈಗಾರಿಕೆಗಳಲ್ಲಿ ಪ್ರಮುಖ ತಂತ್ರಜ್ಞಾನಗಳ ನಿಯೋಜನೆಯೊಂದಿಗೆ ಎರಡೂ ರಾಷ್ಟ್ರಗಳಲ್ಲಿ ಕೈಗಾರಿಕೆಗಳನ್ನು ಬಲಪಡಿಸುವ ಮತ್ತು ಅಭಿವೃದ್ಧಿಪಡಿಸುವ ಉದ್ದೇಶವನ್ನು ಈ ಒಪ್ಪಂದ ಹೊಂದಿದೆ. ಸಾಂಸ್ಥಿಕ ಸಾಮರ್ಥ್ಯಗಳು ಮತ್ತು ಕೌಶಲ್ಯಗಳನ್ನು ನಿರ್ಮಿಸುವ ಗುರಿಯನ್ನೂ ಹೊಂದಿರುವ ಒಪ್ಪಂದದ ವಿಧಿವಿಧಾನ ಪತ್ರಕ್ಕೆ ಭಾರತದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಮತ್ತು ಯುಎಇಯ ಸುಧಾರಿತ ತಂತ್ರಜ್ಞಾನ ಮತ್ತು ಕೈಗಾರಿಕಾ ಸಚಿವ ಸುಲ್ತಾನ್ ಅಲ್ ಜಬೆರ್ ಅಬುಧಾಬಿಯಲ್ಲಿ ಗುರುವಾರ ಸಹಿ ಹಾಕಿದ್ದಾರೆ.

ಹೂಡಿಕೆಗಳಿಗೆ ಸಂಬಂಧಿಸಿದ ಭಾರತ-ಯುಎಇ ಉನ್ನತ ಮಟ್ಟದ ಕಾರ್ಯಪಡೆಯ 11ನೇ ಸಭೆಯಲ್ಲಿ ಪಾಲ್ಗೊಳ್ಳಲು ಗೋಯಲ್ ಅಬುಧಾಬಿಗೆ ಆಗಮಿಸಿದ್ದಾರೆ. ಎರಡೂ ದೇಶಗಳು ತಮ್ಮ ಆರ್ಥಿಕತೆಯ ಬೆಳವಣಿಗೆ ಮತ್ತು ವೈವಿಧ್ಯೀಕರಣಕ್ಕಾಗಿ ಕಾರ್ಯತಂತ್ರದ ಆಸಕ್ತಿಯ ಕ್ಷೇತ್ರಗಳಲ್ಲಿ ಕೈಗಾರಿಕೆಗಳು ಮತ್ತು ತಂತ್ರಜ್ಞಾನಗಳ ಅಭಿವೃದ್ಧಿ ಮತ್ತು ಪ್ರಗತಿಯಲ್ಲಿ ಸಹಕರಿಸಲಿವೆ.

ಕೈಗಾರಿಕಾ ಮತ್ತು ಶೈಕ್ಷಣಿಕ ಸಹಯೋಗಗಳು, ಸಹಯೋಗದ ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಗಳು, ವಿಜ್ಞಾನ ಮತ್ತು ತಂತ್ರಜ್ಞಾನ ನೀತಿಗಳ ಹಂಚಿಕೊಳ್ಳುವಿಕೆ, ಪ್ರಮಾಣೀಕರಣ, ಮಾಪನ ಶಾಸ್ತ್ರ, ಅನುಸರಣೆ ಮೌಲ್ಯಮಾಪನ, ಮಾನ್ಯತೆ ಮತ್ತು `ಹಲಾಲ್' ಪ್ರಮಾಣೀಕರಣದ ಮೂಲಕ ಇದನ್ನು ಸಾಧಿಸಬಹುದಾಗಿದೆ.

ಕೈಗಾರಿಕೆ ಮತ್ತು ಸುಧಾರಿತ ತಂತ್ರಜ್ಞಾನ ಸಹಕಾರ ಕ್ಷೇತ್ರಗಳಲ್ಲಿ ಕೈಗಾರಿಕೆಗಳ ಪೂರೈಕೆಯ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸುವುದು, ನವೀಕರಿಸಬಹುದಾದ ಮತ್ತು ಇಂಧನ ದಕ್ಷತೆ, ಆರೋಗ್ಯ ಮತ್ತು ಜೀವವಿಜ್ಞಾನಗಳು, ಬಾಹ್ಯಾಕಾಶ ವ್ಯವಸ್ಥೆಗಳು, ಕೃತಕ ಬುದ್ಧಿಮತ್ತೆ ಮುಂತಾದ ಕ್ಷೇತ್ರಗಳು ಸೇರಿವೆ ಎಂದು ಮೂಲಗಳು ಹೇಳಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News