ಸಿಂಗಾಪುರ ಅಧ್ಯಕ್ಷೀಯ ಚುನಾವಣೆಗೆ ಭಾರತೀಯ ಮೂಲದ ತಾಮರನ್ ಸ್ಪರ್ಧೆ
ಸಿಂಗಾಪುರ: ಸಿಂಗಾಪುರ ಸಂಜಾತ ಭಾರತೀಯ ಮೂಲದ ತಾಮರನ್ ಷಣ್ಮುಗರತ್ನಂ ಅವರು ಸೆಪ್ಟೆಂಬರ್ 1ರಂದು ನಡೆಯಲಿರುವ ಸಿಂಗಾಪುರದ ಅಧ್ಯಕ್ಷೀಯ ಚುನಾವಣೆಗೆ ತನ್ನ ನಾಮಪತ್ರವನ್ನು ಸಲ್ಲಿಸಿದ್ದಾರೆ. ಚೀನಿ ಮೂಲದ ಇಬ್ಬರು ಮಾಜಿ ಉದ್ಯಮ ಕಾರ್ಯನಿರ್ವಾಹಕರು ಕೂಡಾ ಅಧ್ಯಕ್ಷೀಯ ಹುದ್ದೆಗೆ ತಮ್ಮ ಸ್ಪರ್ಧೆಯನ್ನು ಈಗಾಗಲೇ ಘೋಷಿಸಿದ್ದಾರೆ.
ಸರಕಾರಿ ಸ್ವಾಮ್ಯದ ಕಂಪೆನಿಯೊಂದರ ಮಾಜಿ ಹೂಡಿಕೆ ವರಿಷ್ಠ, 75 ವರ್ಷ ವಯಸ್ಸಿನ ನಿಗ್ ಕೊಕ್ ಸೊಂಗ್ ಹಾಗೂ ಸರಕಾರಿ ಸ್ವಾಮ್ಯದ ವಿಮಾ ಕಂಪೆನಿಯ ಮಾಜಿ ವರಿಷ್ಠ ಟಾನ್ ಕಿನ್ ಲಿಯಾನ್ (75), ಅವರು ಕೂಡಾ ಸಿಂಗಾಪುರದ ಅತ್ಯುನ್ನತ ರಾಜಕೀಯೇತರ ಹುದ್ದೆಯಾದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ
ಸಿಂಗಾಪುರದ 9ನೇ ಅಧ್ಯಕ್ಷನ ಆಯ್ಕೆಗೆ ನಡೆಯುವ ಈಗಾಗಲೇ ಚುನಾವಣೆ ಪ್ರಚಾರ ಆರಂಭಗೊಂಡಿದ್ದು, ಆಗಸ್ಟ್ 30ಕ್ಕೆ ಕೊನೆಗೊಳ್ಳಲಿದೆ. ಸೆಪ್ಟೆಂಬರ್ 1ರಂದು ಮತದಾ ನಡೆಯಲಿದೆ. ಸಿಂಗಾಪುರದ ಹಾಲಿ ಅದ್ಯಕ್ಷ ಹಲೀಮಾ ಯಾಕೂಬ್ ಅವರ ಆರು ವರ್ಷಗಳ ಅವಧಿಯು ಸೆಪ್ಟೆಂಬರ್ 13ರಂದು ಕೊನೆಗೊಳ್ಳಲಿದೆ.
ಅಧ್ಯಕ್ಷೀಯ ಚುನಾವಣೆಗೆ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಬಳಿಕ ಬೆಂಬಲಿಗರನ್ನುದ್ದೇಶಿಸಿ ಭಾಷಣ ಮಾಡಿದ ತಾಮನ್ ಅವರು, ತಾನು ಗೌರವಾನ್ವಿತ ಹಾಗೂ ಘನತೆಯ ಸ್ಪರ್ಧೆಯನ್ನು ಎದುರು ನೋಡುತ್ತಿರುವುದಾಗಿ ತಿಳಿಸಿದರು. ಪ್ರತಿಯೊಬ್ಬ ಅಭ್ಯರ್ಥಿಯು ಸಿಂಗಾಪುರದ ಪ್ರಜೆಗಳಿಗೆ ಏನನ್ನು ತಂದುಕೊಡಲಿದ್ದಾನೆ ಹಾಗೂ ದೇಶದ ಭವಿಷ್ಯಕ್ಕೆ ಏನು ಕೊಡುಗೆ ನೀಡಲಿದ್ದಾರೆಂಬುದನ್ನು ಕೇಂದ್ರೀಕರಿಸಿ ಪ್ರಚಾರ ನಡೆಯಲಿದೆಯೆಂದು ಅವರು ಹೇಳಿದರು.
‘‘ತಾನು ನ್ಯಾಯಯುತವಾದ, ಅಧಿಕ ದಯಾಭರಿತ ಹಾಗೂ ಎಲ್ಲರನ್ನೂ ಒಳಗೊಂಡ ಸಮಾಜದಲ್ಲಿ ನಂಬಿಕೆಯಿರಿಸಿದ್ದೇನೆ. ನನ್ನ ಜೀವನವಿಡೀ ಅದಕ್ಕೆ ಸಮರ್ಪಿತವಾಗಿದೆ. ಸಿಂಗಾಪುರವನ್ನು ವಿಶಿಷ್ಟವಾಗಿಸಬಹುದದಾಗಿ’’ ಎಂದು ತಾಮರನ್ ತನ್ನ ಭಾಷಣದಲ್ಲಿ ಹೇಳಿರುವುದಾಗಿ ವರದಿ ತಿಳಿಸಿದೆ.
ಅರ್ಥಶಾಸ್ತ್ರಜ್ಞರಾದ ತಾಮರನ್ ಅವರು 2001ರಲ್ಲಿ ರಾಜಕಾರಣಕ್ಕೆ ಧುಮುಕುವ ಮುನ್ನ ಸಿಂಗಾಪುರದ ವಿತ್ತೀಯ ಪ್ರಾಧಿಕಾರದಲ್ಲಿ ಅಧಿಕಾರಿಯಾಗಿದ್ದರು.
2011ರಿಂದ 2019ರವರೆಗೆ ಅವರು ಸಿಂಗಾಪುರದ ಆಡಳಿತಾರೂಢ ಪೀಪಲ್ಸ್ ಆ್ಯಕ್ಷನ್ ಪಾರ್ಟಿ ಸರಕಾರದಲ್ಲಿ ಶಿಕ್ಷಣ ಹಾಗೂ ಹಣಕಾಸು ಸಚಿವರಾಗಿ ಮತ್ತು ಉಪಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು.