ಇಂಡೋನೇಶ್ಯ: ನಿರಾಶ್ರಿತರ ವಿರುದ್ಧ ತೀವ್ರಗೊಂಡ ಪ್ರತಿಭಟನೆ ; ರೊಹಿಂಗ್ಯಾ ನಿರಾಶ್ರಿತರ ಶಿಬಿರಕ್ಕೆ ನುಗ್ಗಿದ ವಿದ್ಯಾರ್ಥಿಗಳು

Update: 2023-12-28 17:45 GMT

ಸಾಂದರ್ಭಿಕ ಚಿತ್ರ | Photo: NDTV 

ಜಕಾರ್ತ: ದೇಶದಲ್ಲಿ ರೊಹಿಂಗ್ಯಾ ನಿರಾಶ್ರಿತರ ಸಂಖ್ಯೆ ಹೆಚ್ಚುತ್ತಿರುವುದನ್ನು ವಿರೋಧಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳು ಅಚೆಹ್ ಪ್ರಾಂತದಲ್ಲಿ ರೊಹಿಂಗ್ಯಾಗಳಿಗೆ ನಿರ್ಮಿಸಿರುವ ತಾತ್ಕಾಲಿಕ ಶಿಬಿರಕ್ಕೆ ನುಗ್ಗಿ ದಾಂಧಲೆ ನಡೆಸಿರುವುದಾಗಿ ವರದಿಯಾಗಿದೆ.

ಸಮುದ್ರ ಮಾರ್ಗದ ಮೂಲಕ ದೇಶವನ್ನು ಅಕ್ರಮವಾಗಿ ಪ್ರವೇಶಿಸುವ ರೊಹಿಂಗ್ಯಾ ನಿರಾಶ್ರಿತರನ್ನು ಗಡೀಪಾರು ಮಾಡಬೇಕೆಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಆಗ್ರಹಿಸಿ ಅಚೆಹ್ ಪ್ರಾಂತದಲ್ಲಿ ರ್ಯಾಲಿ ನಡೆಸಿದರು. ನವೆಂಬರ್ ಬಳಿಕ ಸುಮಾರು 1,500 ರೊಹಿಂಗ್ಯಾಗಳು ಸುಮಾತ್ರ ದ್ವೀಪದ ತುದಿಯಲ್ಲಿರುವ ಅಚೆಹ್ ಪ್ರಾಂತಕ್ಕೆ ಆಗಮಿಸಿದ್ದಾರೆ. ಇದನ್ನು ವಿರೋಧಿಸುತ್ತಿರುವ ಸ್ಥಳೀಯರು, ರೊಹಿಂಗ್ಯಾಗಳ ಉಪಸ್ಥಿತಿಯು ಸಮುದಾಯದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಏರುಪೇರಿಗೆ ಕಾರಣವಾಗುವುದರಿಂದ ಅವರನ್ನು ಗಡೀಪಾರು ಮಾಡಬೇಕೆಂದು ಆಗ್ರಹಿಸುತ್ತಿದ್ದಾರೆ.

ಬುಧವಾರ ವಿದ್ಯಾರ್ಥಿ ಸಂಘಟನೆಗಳು ನಡೆಸಿದ ಪ್ರತಿಭಟನೆಯ ಸಂದರ್ಭ ಬಂದಾ ಅಚೆಹ್‍ನಲ್ಲಿನ ಸ್ಥಳೀಯ ಸಮುದಾಯ ಭವನದತ್ತ(ಇಲ್ಲಿ ಸುಮಾರು 137 ರೊಹಿಂಗ್ಯಾಗಳಿಗೆ ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡಲಾಗಿದೆ) ಪ್ರತಿಭಟನಾ ರ್ಯಾಲಿ ನಡೆಯಿತು. ಸಮುದಾಯ ಭವನದೊಳಗೆ ನುಗ್ಗಿದ ವಿದ್ಯಾರ್ಥಿಗಳು  ನಿರಾಶ್ರಿತರ ಬಟ್ಟೆಬರೆ, ಮನೆಬಳಕೆಯ ವಸ್ತುಗಳನ್ನು ಹೊರಗೆಸೆದು ದಾಂಧಲೆ ನಡೆಸಿದಾಗ ಅಧಿಕಾರಿಗಳು ಮಧ್ಯಪ್ರವೇಶಿಸಿ ರೊಹಿಂಗ್ಯಾಗಳನ್ನು ಮತ್ತೊಂದು ಶಿಬಿರಕ್ಕೆ ಸ್ಥಳಾಂತರಿಸಿದರು. ಬಹುತೇಕ ಮಕ್ಕಳು ಹಾಗೂ ಮಹಿಳೆಯರಿರುವ ನಿರಾಶ್ರಿತರ ಗುಂಪು ಗಾಬರಿಯಿಂದ ಅಳುತ್ತಿರುವ ಮತ್ತು ಅವರನ್ನು ಎರಡು ಟ್ರಕ್‍ಗಳಲ್ಲಿ ಬಲವಂತವಾಗಿ ತುಂಬಿಸಿಕೊಂಡು ಸ್ಥಳಾಂತರಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಘಟನೆಯ ಬಗ್ಗೆ ಮಾನವ ಹಕ್ಕುಗಳ ಗುಂಪು ಮತ್ತು ನಿರಾಶ್ರಿತರಿಗಾಗಿನ ವಿಶ್ವಸಂಸ್ಥೆಯ ಹೈಕಮಿಷನರ್(ಯುಎನ್‍ಎಚ್‍ಸಿಆರ್) ಸೇರಿದಂತೆ ಜಾಗತಿಕ ಮಟ್ಟದಲ್ಲಿ  ವ್ಯಾಪಕ ಖಂಡನೆ, ಆಕ್ರೋಶ ವ್ಯಕ್ತವಾಗಿದೆ. ಶಿಬಿರದ ಮೇಲೆ ನಡೆಸಿದ ದಾಳಿಯು ನಿರಾಶ್ರಿತರನ್ನು ಆಘಾತ, ಆತಂಕಕ್ಕೆ ದೂಡಿದೆ ಎಂದು ಯುಎನ್‍ಎಚ್‍ಸಿಆರ್ ಹೇಳಿದೆ. ಇಂಡೋನೇಶ್ಯಾದಲ್ಲಿ ಆಶ್ರಯ ಪಡೆಯುವ ಹತಾಶ ಮಕ್ಕಳು, ಮಹಿಳೆಯರು ಮತ್ತು ಪುರುಷರು ಕಿರುಕುಳ ಮತ್ತು ಸಂಘರ್ಷದ ಸಂತ್ರಸ್ತರು ಮತ್ತು ಪ್ರಾಣಾಂತಿಕ ಸಮುದ್ರ ಪ್ರಯಾಣದಿಂದ ಬದುಕುಳಿದವರು ಎಂಬುದನ್ನು ಮರೆಯಬಾರದು ಎಂದು ಯುಎನ್‍ಎಚ್‍ಸಿಆರ್ ಆಗ್ರಹಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News