ಹ್ಯಾರಿಸ್ ಸೋಲಿನ ನಡುವೆಯೂ "ಸಮೋಸಾ ಕಾಕಸ್" ನಲ್ಲಿ ಹೆಚ್ಚಿದ ಭಾರತದ ಘಮ!
ವಾಷಿಂಗ್ಟನ್: ಭಾರತ ಮೂಲದ ಕಮಲಾ ಹ್ಯಾರಿಸ್ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಆಘಾತಕಾರಿ ಸೋಲು ಅನುಭವಿಸಿದ್ದರೂ, ಭಾರತ ಮೂಲದ ಅಮೆರಿಕನ್ನರ ರಾಜಕೀಯ ಯಶೋಗಾಥೆ ಪ್ರಸಕ್ತ ಚುನಾವಣೆಯಲ್ಲಿ ಹೊಸ ಅಧ್ಯಾಯ ಬರೆದಿದೆ. ಅಮೆರಿಕ ಸರ್ಕಾರದ ಅತ್ಯುನ್ನತ ಮಟ್ಟವನ್ನು ಪ್ರತಿನಿಧಿಸುವವರ ಭಾರತೀಯ ಮೂಲದ ಮುಖಂಡರ ಸಂಖ್ಯೆ ಪ್ರಸಕ್ತ ಚುನಾವಣೆಯಲ್ಲಿ ಹೆಚ್ಚಿದೆ.
ಕ್ಯಾಲಿಫೋರ್ನಿಯಾದ ಅಮಿ ಬೇರಾ ಮತ್ತು ರೋ ಖನ್ನಾ, ಇಲಿನೊಯೀಸ್ ನ ರಜಾ ಕೃಷ್ಣಮೂರ್ತಿ, ಮಿಚಿಗನ್ ನ ಶ್ರೀತಾಂಡೇರ್ ಮತ್ತು ವಾಷಿಂಗ್ಟನ್ ರಾಜ್ಯದ ಪ್ರಮೀಳಾ ಜಯಪಾಲ್ ಹೀಗೆ ಐದು ಮಂದಿ ಕೂಡಾ ಮರು ಆಯ್ಕೆಯಾಗಿದ್ದಾರೆ. ಸಮೋಸಾ ಕ್ಯಾಕಸ್ ಎಂದು ಅನೌಪಚಾರಿಕವಾಗಿ ಕರೆಯಲ್ಪಡುವ ಈ ತಂಡಕ್ಕೆ ಆರನೇ ಭಾರತೀಯ ಅಮೆರಿಕನ್ ಸೇರ್ಪಡೆಯಾಗಿದ್ದು, ವರ್ಜೀನಿಯಾದಿಂದ ಸುಹಾಸ್ ಸುಬ್ರಹ್ಮಣ್ಯಂ ಆಯ್ಕೆಯಾಗಿದ್ದಾರೆ. ರಾಜ್ಯ ಶಾಸನಸಭೆ ಸದಸ್ಯರಾಗಿರುವ ಅವರು, ಸದನದ ರೇಸ್ ನಲ್ಲಿ ಪೂರ್ವ ಕರಾವಳಿಯಿಂದ ಆಯ್ಕೆಯಾದ ಪ್ರಥಮ ದೇಶೀಯ ಎನಿಸಿಕೊಂಡಿದ್ದಾರೆ.
ಸಮೋಸಾ ಕ್ಯಾಕಸ್ ನ ಎಲ್ಲ ಸದಸ್ಯರು ಭಾರತೀಯ ಬೇರು ಹೊಂಂದಿದ್ದು, ಅಮೆರಿಕದ ಶಾಸಕಾಂಗ ಪ್ರಕ್ರಿಯೆಯಲ್ಲಿ ನಿರ್ಣಾಯಕ ಸ್ಥಾನದಲ್ಲಿದ್ದಾರೆ. ಕೃಷ್ಣಮೂರ್ತಿಯವರು ಹೌಸ್ ಸೆಲೆಕ್ಟ್ ಕಮಿಟಿಯ ಅಗ್ರಗಣ್ಯ ಸದಸ್ಯರಾಗಿದ್ದು, ಕಳೆದ ಕಾಂಗ್ರೆಸ್ ನಲ್ಲಿ ಚೀನಾ ಮೂಲದವರ ಜತೆ ಪೈಪೋಟಿಯಲ್ಲಿ ಈ ಸ್ಥಾನಕ್ಕೇರಿದ್ದರು.