ವಿಚಾರಣೆಗಾಗಿ ಹಸೀನಾರನ್ನು ಕರೆತರಲು ಇಂಟರ್ ಪೋಲ್ ನೆರವು ಕೇಳಲು ಬಾಂಗ್ಲಾ ನಿರ್ಧಾರ
ಢಾಕಾ : ಮಾನವತೆಯ ವಿರುದ್ಧ ಅಪರಾಧವನ್ನು ಎಸಗಿದ ಆರೋಪಕ್ಕೆ ಸಂಬಂಧಪಟ್ಟಂತೆ ವಿಚಾರಣೆಯನ್ನು ನಡೆಸಲು ಪದಚ್ಯುತ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರನ್ನು ಭಾರತದಿಂದ ಕರೆತರಲು ತಾನು ಇಂಟರ್ ಪೋಲ್ ನ ನೆರವನ್ನು ಕೋರುವುದಾಗಿ ಬಾಂಗ್ಲಾದೇಶದ ಮಧ್ಯಂತರ ಸರಕಾರವು ರವಿವಾರ ತಿಳಿಸಿದೆ.
‘‘ಶೀಘ್ರದಲ್ಲಿಯೇ ಇಂಟರ್‌ಪೋಲ್ ಮೂಲಕ ಹಸೀನಾ ಅವರನ್ನು ಬಾಂಗ್ಲಾಕ್ಕೆ ಕರೆತರಲು ರೆಡ್ ಕಾರ್ನರ್ ನೋಟಿಸ್ ನೀಡಲಾಗುವುದು. ಫ್ಯಾಶಿಸ್ಟ್ ಅಪರಾಧಿಗಳು ಎಲ್ಲಿ ಅವಿತುಕೊಂಡಿದ್ದರೂ ಸರಿಯೇ, ಅವರನ್ನು ಹಿಂದಕ್ಕೆ ಕರೆತರಲಾಗುವುದು ಮತ್ತು ನ್ಯಾಯಾಲಯದಲ್ಲಿ ಅವರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು’’ ಎಂದು ಬಾಂಗ್ಲಾದ ಕಾನೂನು ವ್ಯವಹಾರಗಳ ಸಲಹೆಗಾರ ಆಸೀಫ್ ನಝ್ರುಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಢಾಕಾದ ಸುಪ್ರೀಂಕೋರ್ಟ್ ಆವರಣದಲ್ಲಿರುವ ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಧೀಕರಣ ಕಟ್ಟಡದ ನವೀಕರಣ ಕಾರ್ಯದ ಸ್ಥಿತಿಗತಿಯ ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡುತ್ತಿದ್ದರು.
ರೆಡ್ ಕಾರ್ನರ್ ನೋಟಿಸ್ ಅಂತಾರಾಷ್ಟ್ರೀಯ ಬಂಧನ ವಾರಂಟ್ ಅಲ್ಲದಿದ್ದರೂ, ಗಡಿಪಾರಿಗಾಗಿ, ಶರಣಾಗತಿ ಮತ್ತಿತರ ಕಾನೂನುಕ್ರಮವನ್ನು ಎದುರಿಸುತ್ತಿರುವ ವ್ಯಕ್ತಿಯನ್ನು ಪತ್ತೆಹಚ್ಚಿ, ಆತನನ್ನು ತಾತ್ಕಾಲಿಕವಾಗಿ ಬಂಧಿಸಲು ಜಾಗತಿಕ ಮನವಿ ಪತ್ರವಾಗಿರುತ್ತದೆ.
ಬಾಂಗ್ಲಾ ಸ್ವಾತಂತ್ರ್ಯ ಯೋಧರ ಕುಟುಂಬಿಕರಿಗೆ ಸರಕಾರಿ ಉದ್ಯೋಗಗಳಲ್ಲಿ ಮೀಸಲಾತಿಯನ್ನು ವಿರೋಧಿಸಿ ವಿದ್ಯಾರ್ಥಿಗಳ ನಡೆಸಿದ ಚಳವಳಿಯನ್ನು ಹಿಂಸಾತ್ಮಕವಾಗಿ ಹತ್ತಿಕ್ಕುವ ಮೂಲಕ ನೂರಾರು ಮಂದಿ ಸಾವು ನೋವಿಗೆ ಕಾರಣರಾದ ಆರೋಪವನ್ನು ಹಸೀನಾ ಹಾಗೂ ಆಕೆಯ ಪಕ್ಷದ ನಾಯಕರು ಎದುರಿಸುತ್ತಿದ್ದಾರೆ.
ಮೀಸಲಾತಿ ವಿರೋಧಿ ಚಳವಳಿಯು ಕ್ರಮೇಣ ಸರಕಾರ ವಿರೋಧಿ ಬಂಡಾಯವಾಗಿ ಮಾರ್ಪಟ್ಟ ಪರಿಣಾಮವಾಗಿ ಹಸೀನಾ ಅವರು ಆಗಸ್ಟ್ 5ರಂದು ರಹಸ್ಯವಾಗಿ ಭಾರತಕ್ಕೆ ಪರಾರಿಯಾಗಿ ಆಶ್ರಯ ಪಡೆದುಕೊಂಡಿದ್ದಾರೆ.
ಬಾಂಗ್ಲಾ ಮಧ್ಯಂತರ ಸರಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರಕಾರದ ಪ್ರಕಾರ ಶೇಖ್ ಹಸೀನಾ ಆಡಳಿತದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ 743 ಮಂದಿ ಮೃತಪಟ್ಟು ಸಾವಿರಾರು ಮಂದಿ ಗಾಯಗೊಂಡಿದ್ದರು.