ಅಮೆರಿಕಕ್ಕೆ ಮೆಡಿಟರೇನಿಯನ್ ಸಮುದ್ರ ಮಾರ್ಗ ಮುಚ್ಚುತ್ತೇವೆ: ಇರಾನ್ ಎಚ್ಚರಿಕೆ
ಟೆಹ್ರಾನ್: ಅಮೆರಿಕ ಮತ್ತದರ ಮಿತ್ರದೇಶಗಳು ಗಾಝಾದಲ್ಲಿನ ‘ಅಪರಾಧ ಕೃತ್ಯ’ಗಳನ್ನು ಮುಂದುವರಿಸಿದರೆ ಮೆಡಿಟರೇನಿಯನ್ ಸಮುದ್ರ ಮಾರ್ಗ ಅಮೆರಿಕಕ್ಕೆ ಮುಚ್ಚಿಹೋಗುತ್ತದೆ ಎಂದು ಇರಾನ್ನ ‘ರೆವೊಲ್ಯುಷನರಿ ಗಾರ್ಡ್ಸ್’ನ ಕಮಾಂಡರ್ ಎಚ್ಚರಿಕೆ ನೀಡಿರುವುದಾಗಿ ಇರಾನ್ನ ಮಾಧ್ಯಮಗಳು ಶನಿವಾರ ವರದಿ ಮಾಡಿವೆ.
ಹಮಾಸ್ ಅನ್ನು ಬೆಂಬಲಿಸುತ್ತಿರುವ ಇರಾನ್, ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಅಪರಾಧವನ್ನು ಅಮೆರಿಕ ಬೆಂಬಲಿಸುತ್ತಿದೆ ಎಂದು ಆರೋಪಿಸುತ್ತಿದೆ.
‘ಇದೇ ರೀತಿ ಮುಂದುವರಿದರೆ ಅವರಿಗೆ(ಅಮೆರಿಕನ್ನರಿಗೆ) ಮೆಡಿಟರೇನಿಯನ್ ಸಮುದ್ರ ಮಾರ್ಗ, ಜಿಬ್ರಾಲ್ಟರ್ ಜಲಸಂಧಿ ಹಾಗೂ ಇತರ ಸಮುದ್ರ ಮಾರ್ಗಗಳು ಮುಚ್ಚಿಹೋಗಲಿವೆ. ನಿನ್ನೆ ಅವರಿಗೆ ಪರ್ಶಿಯನ್ ಕೊಲ್ಲಿ ಮತ್ತು ಹೊರ್ಮುಝ್ ಜಲಸಂಧಿ ದುಃಸ್ವಪ್ನವಾಗಿತ್ತು. ಈಗ ಅವರು ಕೆಂಪು ಸಮುದ್ರದಲ್ಲಿ ಸಿಕ್ಕಿಬಿದ್ದಿದ್ದಾರೆ’ ಎಂದು ರೆವೊಲ್ಯುಷನರಿ ಗಾರ್ಡ್ಸ್ನ ಸಮನ್ವಯ ಕಮಾಂಡರ್ ಬ್ರಿಗೇಡಿಯರ್ ಜನರಲ್ ಮುಹಮ್ಮದ್ ರೆಝಾ ನಖ್ದಿ ಹೇಳಿರುವುದಾಗಿ ವರದಿಯಾಗಿದೆ.
ಲೆಬನಾನ್ನ ಹಿಜ್ಬುಲ್ಲಾ ಬಂಡುಗೋರರು ಮೆಡಿಟರೇನಿಯನ್ ಸಮುದ್ರ ಮಾರ್ಗದಲ್ಲಿ ಇರಾನ್ನಿಂದ ಬೆಂಬಲಿತವಾಗಿರುವ ಏಕೈಕ ಗುಂಪು ಆಗಿದ್ದು ಇರಾನ್ಗೆ ಮೆಡಿಟರೇನಿಯನ್ ಸಮುದ್ರಕ್ಕೆ ನೇರ ಪ್ರವೇಶಮಾರ್ಗವಿಲ್ಲ. ಆದ್ದರಿಂದ ಅದನ್ನು ಹೇಗೆ ಮುಚ್ಚಬಹುದು ಎಂಬ ಪ್ರಶ್ನೆಗೆ ಅವರು ‘ಹೊಸ ಪ್ರತಿರೋಧಕ ಶಕ್ತಿಗಳ ಹುಟ್ಟು ಮತ್ತು ಇತರ ಸಮುದ್ರಮಾರ್ಗಗಳ ಮುಚ್ಚುವಿಕೆ’ಯ ಬಗ್ಗೆ ಉಲ್ಲೇಖಿಸಿದರು ಎಂದು ವರದಿ ಹೇಳಿದೆ.