ಇರಾನ್‌ ಅಧ್ಯಕ್ಷ ಇಬ್ರಾಹಿಂ ರಯೀಸಿ, ವಿದೇಶ ಸಚಿವ ಹುಸೇನ್‌ ಅಮೀರಬ್ದೊಲ್ಲಾಹಿಯಾನ್‌ ಹೆಲಿಕಾಪ್ಟರ್‌ ದುರಂತದಲ್ಲಿ ಮೃತ್ಯು: ವರದಿ

Update: 2024-05-20 05:28 GMT

ಇರಾನ್‌ ಅಧ್ಯಕ್ಷ ಇಬ್ರಾಹಿಂ ರಯೀಸಿ (PTI)

ಹೊಸದಿಲ್ಲಿ: ಇರಾನ್‌ ಅಧ್ಯಕ್ಷ ಇಬ್ರಾಹಿಂ ರಯೀಸಿ ಮತ್ತು ಅವರ ವಿದೇಶ ಸಚಿವ ಹುಸೇನ್‌ ಅಮೀರಬ್ದೊಲ್ಲಾಹಿಯಾನ್‌ ಹೆಲಿಕಾಪ್ಟರ್‌ ದುರಂತದಲ್ಲಿ ಮೃತಪಟ್ಟಿದ್ದಾರೆ ಎಂದು ಇರಾನ್ ‌ಅಧಿಕಾರಿಯೊಬ್ಬರು ರಾಯ್ಟರ್ಸ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾಗಿ ವರದಿಯಾಗಿದೆ. ಆದರೆ ಈ ಬಗ್ಗೆ ಇರಾನ್‌ ಸರಕಾರದ ಅಧಿಕೃತ ಹೇಳಿಕೆ ಬಂದಿಲ್ಲ.

ಹೆಲಿಕಾಪ್ಟರ್‌ ದಟ್ಟ ಮಂಜಿನಿಂದಾವೃತವಾದ ಪರ್ವತ ಪ್ರದೇಶವೊಂದರ ಮೇಲೆ ಸಾಗುತ್ತಿದ್ದಾಗ ಈ ದುರಂತ ಸಂಭವಿಸಿದೆ.

“ಹೆಲಿಕಾಪ್ಟರ್‌ ಪತ್ತೆಯಾದರೂ ಅದರಲ್ಲಿದ್ದ ಪ್ರಯಾಣಿಕರು ಜೀವಂತವಾಗಿರುವ ಕುರಿತು ಯಾವುದೇ ಸುಳಿವು ಲಭ್ಯವಾಗಿಲ್ಲ,” ಎಂದು ಇರಾನ್‌ ಸ್ಟೇಟ್‌ ಟಿವಿ ವರದಿ ಮಾಡಿದೆ.

ಅಧ್ಯಕ್ಷ ಇಬ್ರಾಹಿಂ ರಯೀಸಿ ಅವರು ಇರಾನ್‌ನ ತಬ್ರೀಝ್‌ ನಗರದಲ್ಲಿ ಆಝರ್‌ಬೈಜಾನ್ ನ ಅಧ್ಯಕ್ಷ ಇಲ್ಹಾಮ್ ಅಲಿಯೆವ್ ಜೊತೆಗೂಡಿ ಖಿಝ್‌ ಖಲಾಸಿ ಅಣೆಕಟ್ಟನ್ನು ಎರಡೂ ದೇಶಗಳು ಹಂಚಿರುವ ಗಡಿ ಸ್ಥಳದಲ್ಲಿ ಉದ್ಘಾಟಿಸಿ ವಾಪಸಾಗುತ್ತಿರುವಾಗ ಈ ಘಟನೆ ಸಂಭವಿಸಿದೆ.

ಹೆಲಿಕಾಪ್ಟರ್‌ ಪತನಗೊಂಡ ಸ್ಥಳದ ವೀಡಿಯೋ ಫುಟೇಜ್‌ ಕೂಡ ಲಭ್ಯವಾಗಿದೆ. ಹೆಲಿಕಾಫ್ಟರ್ ನಲ್ಲಿ ಅಧ್ಯಕ್ಷ ರಯೀಸಿ, ವಿದೇಶ ಸಚಿವ ಹುಸೇನ್‌ ಅಮೀರ್ ಅಬ್ದುಲ್ಲಾಹಿ ಮತ್ತು ಇತರ ಅಧಿಕಾರಿಗಳಿದ್ದರು. ಹಾರಾಟ ಆರಂಭಿಸಿದ ಸುಮಾರು 30 ನಿಮಿಷಗಳಲ್ಲಿ ಹೆಲಿಕಾಪ್ಟರ್‌ ಸಂಪರ್ಕ ಕಳೆದುಕೊಂಡಿತ್ತು.

ಆರಂಭಿಕ ವರದಿಗಳ ಪ್ರಕಾರ ಇದೊಂದು ಅಪಘಾತವೆಂದು ಇರಾನ್‌ ಸ್ಟೇಟ್‌ ಮಾದ್ಯಮ ವರದಿ ಮಾಡಿದೆ. ಅಧ್ಯಕ್ಷರ ತಂಡದಲ್ಲಿದ್ದ ಇಬ್ಬರು ರಕ್ಷಣಾ ತಂಡವನ್ನು ಸಂಪರ್ಕಿಸಿದ್ದರು ಎಂದ ಎಕ್ಸಿಕ್ಯುಟಿವ್‌ ಅಫೇರ್ಸ್‌ ಉಪಾಧ್ಯಕ್ಷ ಮುಹ್ಸಿನ್ ಮನ್ಸೂರಿ ಹೇಳಿದ್ದಾರೆ.

ಅಧ್ಯಕ್ಷರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ನಾಪತ್ತೆಯಾಗಿದೆ ಎಂಬ ಸುದ್ದಿಗಳ ಬೆನ್ನಲ್ಲಿ 60ಕ್ಕೂ ಹೆಚ್ಚು ರಕ್ಷಣಾ ತಂಡಗಳು ಕಠಿಣ ಹವಾಮಾನ ಪರಿಸ್ಥಿತಿಗಳ ನಡುವೆ ಶೋಧ ನಡೆಸಿದ್ದವು.

ಇರಾನ್‌ನ ಸುದ್ದಿ ಸಂಸ್ಥೆ ಐಆರ್‌ಎನ್ ಎ ಅಧ್ಯಕ್ಷರ ಪತನಗೊಂಡ ಹೆಲಿಕಾಪ್ಟರ್‌ ಫುಟೇಜ್‌ ಬಿಡುಗಡೆಗೊಳಿಸಿದೆ.

ಹೆಲಿಕಾಪ್ಟರ್‌ನ ಸಂಪೂರ್ಣ ಕ್ಯಾಬಿನ್‌ ಸುಟ್ಟು ಹೋಗಿದೆ. ಕೆಲ ಮೃತದೇಹಗಳು ಗುರುತಿಸಲಾಗದಷ್ಟು ಸುಟ್ಟು ಹೋಗಿವೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News