ಗಾಝಾ ನಗರ ತೊರೆಯುವಂತೆ ಎಲ್ಲಾ ನಿವಾಸಿಗಳಿಗೆ ಇಸ್ರೇಲಿ ಸೇನೆ ಸೂಚನೆ
ಗಾಝಾ ನಗರ : ಗಾಝಾದಲ್ಲಿ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ಇಸ್ರೇಲ್ ಸೇನೆಯು , ಎಲ್ಲಾ ನಿವಾಸಿಗಳು ನಗರವನ್ನು ತೊರೆದುಹೋಗಬೇಕೆಂದು ಆಗ್ರಹಿಸುವ ಕರಪತ್ರಗಳನ್ನು ವಿಮಾನಗಳ ಮೂಲಕ ಎಸೆದಿದೆ.
ಇಸ್ರೇಲ್ ಸೇನೆಯು ಹಮಾಸ್ನ ಗುರಿಗಳ ಮೇಲೆ ದಾಳಿ ನಡೆಸಲಿರುವುದರಿಂದ ಈ ನಗರ ಪ್ರದೇಶವು ಅತ್ಯಂತ ಅಪಾಯಕಾರಿ ಸಂಘರ್ಷ ವಲಯವಾಗಿ ಮಾರ್ಪಾಡುಗೊಳ್ಳಲಿದೆ. ಆದುದರಿಂದ ಗಾಝಾ ನಗರದ ಪ್ರತಿಯೊಬ್ಬರೂ ದಕ್ಷಿಣ ಭಾಗದಲ್ಲಿರುವ ನಿಯೋಜಿತ ಸುರಕ್ಷಿತ ಪ್ರದೇಶಗಳಿಗೆ ನಿಗದಿತ ದಾರಿಗಳ ಮೂಲಕ ತೆರಳುವಂತೆ ಕರಪತ್ರಗಳಲ್ಲಿ ಕರೆ ನೀಡಲಾಗಿದೆ.
ಗಾಝಾ ನಗರದಿಂದ ನಾಗರಿಕರನ್ನು ಹೊರತೆರಳಬೇಕೆಂದು ಮೊದಲ ಔಪಚಾರಿಕ ಆದೇಶವನ್ನು ಇಸ್ರೇಲ್ ಜೂನ್ 27ರಂದು ಹಾಗೂ ಇನ್ನೆರಡು ಆದೇಶಗಳನ್ನು ಆನಂತರದ ದಿನಗಳಲ್ಲಿ ಜಾರಿಗೊಳಿಸಿತ್ತು.
ಗಾಝಾ ನಗರದಿಂದ ದೆಯಿರ್ ಅಲ್ ಲಾಹ್ ಹಾಗೂ ಅಲ್ ಝವಿಯಾದಲ್ಲಿರುವ ಶಿಬಿರಗಳಿಗೆ ಎರಡು ಸುರಕ್ಷಿತ ಮಾರ್ಗಗಳ ಮೂಲಕ ಯಾವುದೇ ತಪಾಸಣೆಯಿಲ್ಲದೆ ಸಾಗಬಹುದಾಗಿದೆ ಎಂದು ಅದು ಹೇಳಿದ್ದಾರೆ.
ಗಾಝಾದ ಪೂರ್ವ ಶುಜಯಿಯಾ ಪ್ರದೇಶದಲ್ಲಿ ಸೇನಾಪಡೆಗಳು ಹೊಸದಾಗಿ ಆಕ್ರಮಣವನ್ನು ಆರಂಭಿಸಿದಾಗಿನಿಂದ ಸಾವಿರಾರು ನಿವಾಸಿಗಳು ಗಾಝಾ ನಗರದಿಂದ ಪಲಾಯನಗೈದಿದ್ದಾರೆ.