ಕಮಲಾ ಹ್ಯಾರಿಸ್ ಭಾರತೀಯಳೇ ಅಥವಾ ಕಪ್ಪುಜನಾಂಗೀಯಳೇ? : ವಿವಾದಕ್ಕೆ ಗ್ರಾಸವಾದ ಟ್ರಂಪ್ ಟೀಕೆ

Update: 2024-08-01 17:29 GMT

PC : timesofindia

ವಾಶಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಾಟ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರ ಜನಾಂಗೀಯತೆಯನ್ನು ಪ್ರಶ್ನಿಸುವ ಮೂಲಕ ಅವರ ಪ್ರತಿಸ್ಪರ್ಧಿ ಹಾಗೂ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿವಾದವನ್ನು ಸೃಷ್ಟಿಸಿದ್ದಾರೆ.

ಚಿಕಾಗೋದಲ್ಲಿ ಬುಧವಾರ ಕಪ್ಪು ಜನಾಂಗೀಯ ಸುದ್ದಿಗಾರರ ಸಮಾವೇಶದಲ್ಲಿ ಮಾತನಾಡಿದ ಸಂದರ್ಭದಲ್ಲಿ ಅವರು ‘‘ಕಮಲಾ ಹ್ಯಾರಿಸ್ ಈ ಮೊದಲು ಕಪ್ಪು ಜನಾಂಗೀಯ ಮಹಿಳೆಯೆಂದು ನನಗೆ ತಿಳಿದಿರಲಿಲ್ಲ. ಮೊದಲು ಅವರು ತನ್ನನ್ನು ಭಾರತೀಯಳೆಂದು ಬಿಂಬಿಸಿಕೊಳ್ಳುತ್ತಿದ್ದರೆ.ಆದರೆ ಇದ್ದಕ್ಕಿದ್ದಂತೆ ಈಗ ಆಕೆ ತಾನು ಕರಿಯ ಜನಾಂಗಕ್ಕೆ ಸೇರಿದವಳೆಂದು ತನ್ನನ್ನು ಬಿಂಬಿಸಿಕೊಳ್ಳಲು ಆಸಕ್ತಿ ವಹಿಸಿದ್ದಾರೆ. ಆದರೆ ಅವರು ಭಾರತೀಯರೇ ಅಥವಾ ಕಪ್ಪು ಜನಾಂಗೀಯರೇ ಎಂಬುದು ಈಗಲೂ ತನಗೆ ತಿಳಿಯುತ್ತಿಲ್ಲವೆಂದು ಟ್ರಂಪ್ ವ್ಯಂಗ್ಯವಾಡಿದ್ದಾರೆ.

ಟ್ರಂಪ್ ಅವರ ಟೀಕೆಗೆ ಕಮಲಾ ಹ್ಯಾರಿಸ್ ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ವಿಭಜಿಸುವುದು ಹಾಗೂ ಅಗೌರವವನ್ನು ತೋರುವುದು ಟ್ರಂಪ್ ಅವರ ಹಳೆಯ ಚಾಳಿಯ ಪ್ರದರ್ಶನವಾಗಿದೆ. ಅಮೆರಿಕದ ಜನರು ಸತ್ಯವನ್ನು ಹೇಳುವ ನಾಯಕನನ್ನು ಹೊಂದಲು ಅರ್ಹರಾಗಿದ್ದಾರೆ. ಭಿನ್ನಾಭಿಪ್ರಾಯಗಳು ಜನರನ್ನು ವಿಭಜಿಸುವುದಿಲ್ಲವೆಂಬುದನ್ನು ಅರಿತಿರುವ ನಾಯಕನನ್ನು ಪಡೆಯಲು ಅರ್ಹರಾಗಿದ್ದಾರೆ ಎಂದು ಕಮಲಾ ಹ್ಯಾರಿಸ್ ಹೇಳಿದ್ದಾರೆ.

ಕಮಲಾ ಅವರ ತಾಯಿ ಭಾರತೀಯರಾಗಿದ್ದು, ತಂದೆ ಜಮೈಕಾ ಮೂಲದವರು. ಅಮೆರಿಕದ ಉಪಾಧ್ಯಕ್ಷ ಹುದ್ದೆಯನ್ನು ಆಲಂಕರಿಸಿದ ಏಶ್ಯನ್-ಅಮೆರಿಕನ್ ಎಂಬ ಹೆಗ್ಗಳಿಕೆಯನ್ನು ಅವರು ಹೊಂದಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News