ಗಾಝಾ ಮೇಲೆ ಇಸ್ರೇಲ್ ಬಾಂಬ್ ದಾಳಿ ; 30ಕ್ಕೂ ಅಧಿಕ ಸಾವು
ಗಾಝಾ: ಯುದ್ಧ ಪೀಡಿತ ಗಾಝಾದಲ್ಲಿ ದಾಳಿಯನ್ನು ತೀವ್ರಗೊಳಿಸಿರುವ ಇಸ್ರೇಲ್, ಖಾನ್ ಯೂನಿಸ್ ನಗರದ ಮೇಲೆ ಗುರುವಾರ ಬಾಂಬ್ಗಳ ಸುರಿಮಳೆಗರೆದಿದ್ದು, 30ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.
ಹಮಾಸ್ ಸಂಘಟನೆಯ ವರಿಷ್ಠ ಯಾಹ್ಯಾಸಿನ್ವಾರ್ನ ಹುಟ್ಟೂರಾದ ಖಾನ್ ಯೂನಿಸ್ ನಗರವನ್ನು ತಾನು ಸುತ್ತುವರಿದಿರುವುದಾಗಿ ಇಸ್ರೇಲ್ ಸೇನೆ ಹೇಳಿಕೊಂಡಿದೆ. ಆಕ್ಟೋಬರ್ 7ರಂದು ಹಮಾಸ್ ಇಸ್ರೇಲಿ ನೆಲದ ಮೇಲೆ ಹಮಾಸ್ ನಡೆಸಿದ ದಾಳಿಯಲ್ಲಿ ಯಾಹ್ಯಾ ಸಿನ್ವಾರ್ನ ಕೈವಾಡವಿರುವುದಾಗಿ ಇಸ್ರೇಲ್ ಆಪಾದಿಸಿದೆ.
ಕಳೆದ 24 ತಾಸುಗಳಲ್ಲಿ ಖಾನ್ ಯೂನಿಸ್ ನಗರದ ಮೇಲೆ ನಡೆದ ದಾಳಿಯಲ್ಲಿ ಕನಿಷ್ಠ 50 ಮಂದಿ ಸಾವನ್ನಪ್ಪಿದ್ದಾರೆಂದು ಆರೋಗ್ಯ ಸಚಿವಾಲಯ ತಿಳಿಸಿದೆ. ನಗರದ ವಿವಿಧೆಡೆ ನಡೆದ ಮುಖಾಮುಖಿ ಗುಂಡಿನ ಕಾಳಗಗಳಲ್ಲಿ ಹಲವಾರು ಹಮಾಸ್ ಹೋರಾಟಗಾರರು ಸಾವನ್ನಪ್ಪಿರುವುದಾಗಿ ಅದು ಹೇಳಿದೆ. ಕೇಂದ್ರ ಹಾಗೂ ಉತ್ತರ ಗಾಝಾದ ಹಲವೆಡೆ ಹಮಾಸ್ ಕಾರ್ಯಕರ್ತರನ್ನು ಗುರಿಯಾಗಿಸಿ ದಾಳಿಗಳನ್ನು ನಡೆಸಿರುವುದಾಗಿಯೂ ಇಸ್ರೇಲ್ ಸೇನೆ ಹೇಳಿಕೊಂಡಿದೆ.
ಕದನ ವಿರಾಮಕ್ಕಾಗಿ ನೆತನ್ಯಾಹು ಮೇಲೆ ಹೆಚ್ಚಿದ ಒತ್ತಡ
ಗಾಝಾದಲ್ಲಿ ಕದನವಿರಾಮವನ್ನು ಏರ್ಪಡಿಸುವಂತೆ ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಸ್ವದೇಶದಲ್ಲಿ ಒತ್ತಡ ಹೆಚ್ಚುತ್ತಿದೆ. ಗಾಝಾದಲ್ಲಿ ಸೇನಾ ಕಾರ್ಯಾಚರಣೆಯ ಸಂದರ್ಭದಲ್ಲಿ ಸೋಮವಾ ಒಂದೇ ದಿನ 24 ಇಸ್ರೇಲಿ ಸೈನಿಕರು ಸಾವನ್ನಪ್ಪಿದ ಘಟನೆ ಬಳಿಕ ಈ ಒತ್ತಡವು ತೀವ್ರಗೊಂಡಿದೆ.
‘‘ ರಕ್ತಪಾತವನ್ನು ನಿಲ್ಲಿಸಿ’’ ಎಂದು ಕರೆ ನೀಡುವ ಬ್ಯಾನರ್ಗಳನ್ನು ಹಿಡಿದಿದ್ದ ನೂರಾರು ಇಸ್ರೇಲಿ ಪ್ರತಿಭಟನಕಾರರು ಗುರುವಾರ ಟೆಲ್ಅವೀವ್ನಲ್ಲಿ ರಸ್ತೆ ತಡೆ ನಡೆಸಿದರು. ಹಮಾಸ್ನ ವಶದಲ್ಲಿರುವ ಒತ್ತೆಯಾಳುಗಳ ಬಿಡುಗಡೆಗೆ ರಾಜಿಸೂತ್ರವನ್ನು ಏರ್ಪಡಿಸುವಂತೆ ಅವರು ಇಸ್ರೇಲ್ ಸರಕಾರವನ್ನು ಆಗ್ರಹಿಸಿದ್ದಾರೆ.
ಗಾಝಾ ಬಿಕ್ಕಟ್ಟು ಮಿಲಿಟರಿ ಬಲದ ಮೂಲಕ ಪರಿಹಾರವಾಗದು. ರಾಜತಾಂತ್ರಿಕ ಪರಿಹಾರ ಮಾತ್ರವೇ ಸಾಧ್ಯ ನಮಗೆ ಕದನವಿರಾಮ ಬೇಕಾಗಿದೆ. ಕೇವಲ ಒಪ್ಪಂದದ ಮೂಲಕವಷ್ಟೇ ಒತ್ತೆಯಾಳುಗಳನ್ನು ಮರಳಿ ತರಬಹುದಾಗಿದೆ ಎಂದವರು ಹೇಳಿದ್ದಾರೆ.
ಒತ್ತೆಯಾಳುಗಳ ಬಿಡುಗಡೆಗೊಳಿಸುವ ಬಗ್ಗೆ ನೂತನ ಒಪ್ಪಂದವನ್ನು ಏರ್ಪಡಿಸುವ ನಿಟ್ಟಿನಲ್ಲಿ ಸಂಧಾನ ಮಾತುಕತೆಗಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ಮಧ್ಯ ಏಶ್ಯ ಪ್ರತಿನಿಧಿ ಬ್ರೆಟ್ ಮ್ಯಾಕ್ಗುರ್ಕ್ ಅವರು ಪ್ರಾಂತಕ್ಕೆ ಆಗಮಿಸಿದ್ದಾರೆಂದು ಮೂಲಗಳು ತಿಳಿಸಿವೆ.