ಇಸ್ರೇಲ್ ಪ್ರತೀಕಾರ ದಾಳಿ | ಹಿಜ್ಬುಲ್ಲಾದ ಕಮಾಂಡರ್ ಮೃತ್ಯು
ಬೈರೂತ್ : ಲೆಬನಾನ್‍ನ ದಕ್ಷಿಣ ಬೈರೂತ್‍ನಲ್ಲಿ ಹಿಜ್ಬುಲ್ಲಾದ ಭದ್ರಕೋಟೆಯ ಮೇಲೆ ನಡೆಸಿದ ರಾಕೆಟ್ ದಾಳಿಯಲ್ಲಿ ಹಿಜ್ಬುಲ್ಲಾದ ಹಿರಿಯ ಕಮಾಂಡರ್ ಫೌದ್ ಶುಕ್ರ್ ಮೃತಪಟ್ಟಿರುವುದಾಗಿ ಇಸ್ರೇಲ್ ಸೇನೆ ಹೇಳಿದೆ.
ಗೋಲನ್ ಹೈಟ್ಸ್ ಮೇಲೆ ಹಿಜ್ಬುಲ್ಲಾ ನಡೆಸಿದ್ದ ದಾಳಿಗೆ ಹೊಣೆಗಾರನಾಗಿದ್ದ ಫೌದ್ ಶುಕ್ರ್ ಮಂಗಳವಾರ ನಡೆಸಿದ ರಾಕೆಟ್ ದಾಳಿಯಲ್ಲಿ ಸಾವನ್ನಪ್ಪಿರುವುದಾಗಿ ಇಸ್ರೇಲ್ ಸೇನೆ ಘೋಷಿಸಿದೆ. ಆದರೆ ಇಸ್ರೇಲ್ ರಾಕೆಟ್ ದಾಳಿಯ ಗುರಿಯಾಗಿದ್ದ ಫೌದ್ ಶುಕ್ರ್ ದಾಳಿಯಿಂದ ಬದುಕುಳಿದಿರುವುದಾಗಿ ಹಿಜ್ಬುಲ್ಲಾ ಮೂಲಗಳನ್ನು ಉಲ್ಲೇಖಿಸಿ ಎಎಫ್‍ಪಿ ವರದಿ ಮಾಡಿದೆ. 2008ರಲ್ಲಿ ದಮಾಸ್ಕಸ್‍ನಲ್ಲಿ ನಡೆದಿದ್ದ ಕಾರು ಬಾಂಬ್ ದಾಳಿಯಲ್ಲಿ ಹತನಾಗಿದ್ದ ಇಮಾದ್ ಮುಗ್ನಿಯೆಹ್ ಅವರ ಉತ್ತರಾಧಿಕಾರಿಯಾಗಿದ್ದ ಶುಕ್ರ್ ದಕ್ಷಿಣ ಲೆಬನಾನ್‍ನಲ್ಲಿ ಮಿಲಿಟರಿ ಕಾರ್ಯಾಚರಣೆಯ ಕಮಾಂಡರ್ ಆಗಿ ಕಾರ್ಯನಿರ್ವಹಿಸಿರುವುದಾಗಿ ವರದಿಯಾಗಿದೆ.
ಮಂಗಳವಾರ ಇಸ್ರೇಲ್ ನಡೆಸಿದ ದಾಳಿಯಲ್ಲಿ ಇಬ್ಬರು ಮಕ್ಕಳ ಸಹಿತ ಮೂವರು ಮೃತಪಟ್ಟಿದ್ದು 74 ಮಂದಿ ಗಾಯಗೊಂಡಿರುವುದಾಗಿ ಲೆಬನಾನ್‍ನ ಆರೋಗ್ಯ ಸಚಿವಾಲಯ ಹೇಳಿದೆ. ರಾಕೆಟ್ ದಾಳಿಯಲ್ಲಿ ಎಂಟು ಮಹಡಿಯ ಕಟ್ಟಡದಲ್ಲಿ ಭಾರೀ ಸ್ಫೋಟದ ಬಳಿಕ ಕಟ್ಟಡದ ಭಾಗ ಕುಸಿಯುತ್ತಿರುವ ವೀಡಿಯೊವನ್ನು ಎಎಫ್‍ಪಿ ಸುದ್ದಿಸಂಸ್ಥೆ ಪ್ರಕಟಿಸಿದೆ.
ಸ್ಫೋಟದ ಕೆಲ ಕ್ಷಣಗಳ ಬಳಿಕ `ಹಿಜ್ಬುಲ್ಲಾ ಕೆಂಪುಗೆರೆ ದಾಟಿದೆ' ಎಂದು ಇಸ್ರೇಲ್ ರಕ್ಷಣಾ ಸಚಿವ ಯೊವಾವ್ ಗ್ಯಾಲಂಟ್ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ. ಇಸ್ರೇಲ್‍ನ ಆಕ್ರಮಣವನ್ನು ಖಂಡಿಸುವುದಾಗಿ ಲೆಬನಾನ್ ಪ್ರಧಾನಿ ನಜೀಬ್ ಮಕಾತಿ ಪ್ರತಿಕ್ರಿಯಿಸಿದ್ದಾರೆ. ಇರಾನ್ ಮತ್ತು ರಶ್ಯವೂ ಇಸ್ರೇಲ್‍ನ ದಾಳಿಯನ್ನು ಖಂಡಿಸಿದ್ದರೆ, ಇಸ್ರೇಲ್‍ಗೆ ಸ್ವರಕ್ಷಣೆಯ ಹಕ್ಕು ಇದೆ ಎಂದು ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಪ್ರತಿಪಾದಿಸಿದ್ದಾರೆ.