ಗಾಝಾ ಮೇಲಿನ ದಾಳಿ ನಿರ್ಧರಿಸಲು ಇಸ್ರೇಲ್ ಸ್ವತಂತ್ರ: ಬೈಡನ್
ವಾಷಿಂಗ್ಟನ್: ಗಾಝಾ ಮೇಲೆ ದಾಳಿ ನಡೆಸುವ ವಿಚಾರದಲ್ಲಿ ಸ್ವಂತ ನಿರ್ಧಾರ ಕೈಗೊಳ್ಳುವ ಸ್ವಾತಂತ್ರ್ಯ ಇಸ್ರೇಲ್ ಗೆ ಇದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅಭಿಪ್ರಾಯಪಟ್ಟಿದ್ದಾರೆ. ಗಾಝಾ ಮೇಲಿನ ದಾಳಿ ವಿಳಂಬ ಮಾಡುವಂತೆ ಅಮೆರಿಕ ಇಸ್ರೇಲ್ ಗೆ ಸಲಹೆ ಮಾಡಿದೆಯೇ ಎಂಬ ಬಗ್ಗೆ ಕೇಳಲಾದ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದರು.
ಅಕ್ಟೋಬರ್ 7ರಂದು ಹಮಾಸ್ ಹೋರಾಟಗಾರರು ಇಸ್ರೇಲ್ ಮೇಲೆ ಮಾಡಿದ ದಾಳಿಗೆ ಪ್ರತೀಕಾರವಾಗಿ ಗಾಝಾ ಮೇಲೆ ಸಂಘಟಿತ ದಾಳಿ ನಡೆಸಲು ಇಸ್ರೇಲ್ ಸಜ್ಜಾಗಿರುವ ನಡುವೆಯೇ ಈ ಹೇಳಿಕೆ ನೀಡಿದ್ದಾರೆ. ಗಾಝಾ ಮೇಲಿನ ದಾಳಿಗೆ ಸಜ್ಜಾಗಿದ್ದೇವೆ ಎಂದು ಮಂಗಳವಾರ ಇಸ್ರೇಲ್ ನ ರಕ್ಷಣಾ ಪಡೆಗಳು ಪ್ರಕಟಿಸಿವೆ. ಐಡಿಎಫ್ ಮುಖ್ಯಸ್ಥ, ಲೆಫ್ಟಿನೆಂಟ್ ಜನರಲ್ ಹರಝಿ ಹಲೇವಿ ಅವರು, "ನಾವು ದಾಳಿ ನಡೆಸಲು ಸಜ್ಜಾಗಿದ್ದೇವೆ ಎನ್ನುವುದನ್ನು ಸ್ಪಷ್ಟಪಡಿಸಲು ಬಯಸುತ್ತೇವೆ" ಎಂದು ಹೇಳಿದರು.
"ಈ ಹಂತದಲ್ಲಿ ಆಯಕಟ್ಟಿನ ಮತ್ತು ತಂತ್ರಗಾರಿಕೆ ಅಂಶಗಳು ಮತ್ತಷ್ಟು ಸಜ್ಜಾಗಲು ಮತ್ತು ಪರಿಸ್ಥಿತಿಯ ಲಾಭ ಪಡೆಯಲು ನಮಗೆ ಅವಕಾಶ ನೀಡಿವೆ. ದಾಳಿಯ ನಿಖರವಾದ ಸಮಯವನ್ನು ನಿರ್ಧರಿಸುವ ಬಗ್ಗೆ ಉನ್ನತ ಆಡಳಿತಗಾರರ ಜತೆ ಚರ್ಚಿಸಲಾಗುತ್ತಿದೆ ಎಂದು ವಿವರಿಸಿದರು.
ಈ ಮಧ್ಯೆ ವಿಶ್ವಸಂಸ್ಥೆ ಹೇಳಿಕೆ ನೀಡಿ, ಗಾಝಾದಲ್ಲಿ ಕದನ ವಿರಾಮಕ್ಕೆ ಮನವಿ ಮಾಡಿದೆ. ಇಸ್ರೇಲ್ ಈ ಕರೆಯನ್ನು ತಿರಸ್ಕರಿಸಿದ್ದು, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಈ ಹುದ್ದೆಗೆ ತಕ್ಕ ಸಾಮರ್ಥ್ಯ ಹೊಂದಿಲ್ಲ ಎಂದು ವಿಶ್ವಸಂಸ್ಥೆಯಲ್ಲಿ ಇಸ್ರೇಲ್ ರಾಯಭಾರಿಯಾಗಿರುವ ಗಿಲಡ್ ಎರ್ಡಾನ್ ಹೇಳಿದ್ದಾರೆ. ಮಕ್ಕಳು, ಮಹಿಳೆಯರು ಮತ್ತು ವೃದ್ಧರು ಸೇರಿದ ಸಾಮೂಹಿಕ ಹತ್ಯಾಕಾಂಡ ಬಗ್ಗೆ ಅವರಿಗೆ ಇನ್ನೂ ಅರಿವು ಇಲ್ಲ ಎಂದು ಟೀಕಿಸಿದ್ದಾರೆ.
ಕದನ ವಿರಾಮ ಸಲಹೆಗಳನ್ನು ತಿರಸ್ಕರಿಸಿರುವ ಇಸ್ರೇಲ್ ವಿದೇಶಾಂಗ ಸಚಿವ ಎಲಿ ಕೊಹೆನ್, "ನಮ್ಮ ಸ್ವಂತ ಅಸ್ತಿತ್ವವನ್ನೇ ನಾಶ ಮಾಡಲು ಮತ್ತು ಹತ್ಯೆ ಮಾಡಲು ಪ್ರತಿಜ್ಞೆ ಮಾಡಿರುವವರ ಜತೆ ಶಾಂತಿ ಒಪ್ಪಂದ ಮಾಡಿಕೊಳ್ಳುವ ಸಲಹೆಯನ್ನು ಹೇಗೆ ಒಪ್ಪಿಕೊಳ್ಳಲು ಸಾಧ್ಯ?" ಎಂದು ಪ್ರಶ್ನಿಸಿದ್ದಾರೆ.