ಗಾಝಾದಿಂದ ಆಮದು ಸ್ಥಗಿತಗೊಳಿಸಿದ ಇಸ್ರೇಲ್

Update: 2023-09-05 17:48 GMT

ಸಾಂದರ್ಭಿಕ ಚಿತ್ರ

ಜೆರುಸಲೇಂ: ಸ್ಫೋಟಕಗಳನ್ನು ಕಳ್ಳಸಾಗಣೆ ಮಾಡುವ ಪ್ರಯತ್ನ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಗಾಝಾದಿಂದ ಎಲ್ಲಾ ರೀತಿಯ ಆಮದನ್ನೂ ಸ್ಥಗಿತಗೊಳಿಸಲಾಗಿದೆ ಎಂದು ಇಸ್ರೇಲ್ ಸೇನೆ ಮತ್ತು ರಕ್ಷಣಾ ಸಚಿವಾಲಯ ಹೇಳಿದೆ.

ಇತ್ತೀಚೆಗೆ ಕೆರೆಮ್ ಶಲೋಮ್ ಗಡಿದಾಟು(ಕ್ರಾಸಿಂಗ್)ನಲ್ಲಿ ಮೂರು ಟ್ರಕ್‍ಗಳಲ್ಲಿ ತುಂಬಿಸಿದ್ದ ಜವಳಿಯ ಸರಕಿನಡಿ ಭಾರೀ ಪ್ರಮಾಣದ ಅತ್ಯಾಧುನಿಕ ಸ್ಫೋಟಕ ವಸ್ತುಗಳನ್ನು ರಕ್ಷಣಾ ಸಚಿವಾಲಯದ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ ಎಂದು ಹೇಳಿಕೆ ತಿಳಿಸಿದೆ. ಇಸ್ರೇಲ್ ಮತ್ತು ಫೆಲಸ್ತೀನ್ ನಡುವಿನ ಗಡಿಪ್ರದೇಶದ ಗಡಿದಾಟುಗಳನ್ನು ಇಸ್ರೇಲ್‍ನ ರಕ್ಷಣಾ ಇಲಾಖೆ ನಿಯಂತ್ರಿಸುತ್ತಿದೆ.

ರಕ್ಷಣಾ ಸಚಿವ ಯೊವಾವ್ ಗ್ಯಾಲಂಟ್‍ರ ಅನುಮೋದನೆ ಪಡೆದು ರಕ್ಷಣಾ ಸಿಬಂದಿ ವಿಭಾಗದ ಮುಖ್ಯಸ್ಥ ಹೆರ್ಝೆಯ್ ಹಲೇವಿ `ಗಾಝಾದಿಂದ ಇಸ್ರೇಲ್‍ಗೆ ವಾಣಿಜ್ಯ ವಿತರಣೆಗಳ ಸ್ಥಗಿತಕ್ಕೆ ಆದೇಶಿಸಿದ್ದಾರೆ. ಇದು ಗಡಿದಾಟಿನಲ್ಲಿ ಭದ್ರತಾ ವ್ಯವಸ್ಥೆಯ ಹೊಂದಾಣಿಕೆಗೆ ಅನುವು ಮಾಡಿಕೊಡುತ್ತದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿ ಸರಕು ಪೂರೈಕೆ ಮರು ಆರಂಭಿಸುವ ಬಗ್ಗೆ ನಿರ್ಧರಿಸಲಾಗುವುದು.

ಮಾನವೀಯ ಸೌಲಭ್ಯಗಳ ಪ್ರಯೋಜನವನ್ನು ಭಯೋತ್ಪಾದಕ ಸಂಘಟನೆಗಳು ಭಯೋತ್ಪಾದನೆಯ ಕಾರ್ಯಕ್ಕೆ ಬಳಸುವುದಕ್ಕೆ ಅವಕಾಶ ನೀಡಲಾಗದು' ಎಂದು ಹೇಳಿಕೆ ತಿಳಿಸಿದೆ.

2007ರಲ್ಲಿ ಫೆಲಸ್ತೀನೀಯರ ಸಶಸ್ತ್ರ ಗುಂಪು ಹಮಾಸ್ ಗಾಝಾ ಪಟ್ಟಿಯಲ್ಲಿ ಅಧಿಕಾರವನ್ನು ವಶಪಡಿಸಿಕೊಂಡಾಗಿನಿಂದ ಗಾಝಾ ಪಟ್ಟಿಯು ಇಸ್ರೇಲ್‍ನ ದಿಗ್ಬಂಧನಲ್ಲಿದೆ. ಇಸ್ರೇಲ್ ಮತ್ತು ಗಾಝಾದ ನಡುವೆ ಸರಕು ಸಾಗಾಟಕ್ಕೆ ಕೆರೆಮ್ ಶಲೋಮ್ ಏಕೈಕ ಗಡಿದಾಟು ಆಗಿದೆ.

ನಿಷೇಧ ತೆರವಿಗೆ ಫೆಲಸ್ತೀನ್ ಆಗ್ರಹ

ಗಾಝಾ: ಗಾಝಾದಿಂದ ರಫ್ತುಗಳ ಮೇಲಿನ ನಿಷೇಧವನ್ನು ಇಸ್ರೇಲ್ ತಕ್ಷಣ ಹಿಂದಕ್ಕೆ ಪಡೆಯಬೇಕು. ಈ ನಿಷೇಧವು ಗಾಝಾ ಪಟ್ಟಿಯಲ್ಲಿರುವ ಸಾವಿರಾರು ಕುಟುಂಬಗಳನ್ನು ಇನ್ನಷ್ಟು ಅನಿಶ್ಚಿತತೆಯಲ್ಲಿ ಮುಳುಗಿಸಲಿದೆ ಎಂದು ಫೆಲಸ್ತೀನೀಯರು ಆಗ್ರಹಿಸಿದ್ದಾರೆ.

ಗಾಝಾದಿಂದ ಇಸ್ರೇಲ್ ಹಾಗೂ ಪಶ್ಚಿಮದಂಡೆಗೆ ಮೀನು ಹಾಗೂ ಇತರ ಸಮುದ್ರ ಖಾದ್ಯಗಳು ಹೆಚ್ಚಾಗಿ ರಫ್ತಾಗುತ್ತಿವೆ. ರಫ್ತು ಸ್ಥಗಿತಗೊಂಡರೆ ಸ್ಥಳೀಯವಾಗಿ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುವ ಪರಿಸ್ಥಿತಿ ಬರಲಿದೆ ಎಂದು ಗಾಝಾದ ವ್ಯಾಪಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಕಿರಿದಾದ ಗಾಝಾ ಪಟ್ಟಿಯಲ್ಲಿ ಸುಮಾರು 2 ದಶಲಕ್ಷದಷ್ಟು ಫೆಲಸ್ತೀನೀಯರು ವಾಸಿಸುತ್ತಿದ್ದು ಇವರಲ್ಲಿ ಹೆಚ್ಚಿನವರು 1948ರಲ್ಲಿ ಇಸ್ರೇಲ್ ಸ್ಥಾಪನೆಯಾದಾಗ ಅಲ್ಲಿಂದ ಓಡಿಬಂದ ವಲಸಿಗರ ವಂಶಸ್ಥರು.

ನಮ್ಮ ಜನರ ವಿರುದ್ಧದ ದಿಗ್ಬಂಧನ ಹಾಗೂ ಆಕ್ರಮಣಶೀಲತೆಯ ಕಾರಣ ಈಗಾಗಲೇ ಅಸ್ತಿತ್ವದಲ್ಲಿರುವ ಉದ್ವಿಗ್ನತೆಯನ್ನು ಇಸ್ರೇಲ್‍ನ ಉಪಕ್ರಮ ಹೆಚ್ಚಿಸಲಿದೆ ಎಂದು ಹಮಾಸ್‍ನ ವಕ್ತಾರ ಹಝೆಮ್ ಖಾಸಿಮ್ ಹೇಳಿದ್ದಾರೆ. ಈ ಮಧ್ಯೆ, ಇಸ್ರೇಲ್ ಆಕ್ರಮಿತ ಪಶ್ಚಿಮ ದಂಡೆಯ ರಮಲ್ಲಾದಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಫೆಲಸ್ತೀನ್ ಅರ್ಥಸಚಿವ ಖಾಲಿದ್ ಅಸಾಯಿಲಿ ` ಈ ಅನ್ಯಾಯದ ನಿರ್ಧಾರವು ಗಾಝಾದಲ್ಲಿ ಮಾನವೀಯ ಬಿಕ್ಕಟ್ಟನ್ನು ಉಂಟುಮಾಡಿದ, 2007ರಿಂದ ಇಸ್ರೇಲ್ ಅಳವಡಿಸಿಕೊಂಡ ಸಾಮೂಹಿಕ ಶಿಕ್ಷೆಯ ಕಾರ್ಯನೀತಿಗೆ ಮತ್ತೊಂದು ಸೇರ್ಪಡೆಯಾಗಿದೆ' ಎಂದಿದ್ದಾರೆ.

ಗಾಝಾದಿಂದ ವಾರ್ಷಿಕ 134 ದಶಲಕ್ಷ ಡಾಲರ್ನಷ್ಟು ಮೌಲ್ಯದ ಸರಕುಗಳು ರಫ್ತಾಗುತ್ತಿದ್ದು ಇದರಲ್ಲಿ ಬಹುತೇಕ ಇಸ್ರೇಲ್ ಹಾಗೂ ಪಶ್ಚಿಮ ದಂಡೆಗೆ ಪೂರೈಕೆಯಾಗುತ್ತಿದೆ. ಇಸ್ರೇಲ್‍ನ ನಿರ್ಧಾರದಿಂದ ಗಾಝಾದಲ್ಲಿನ 60,000 ಕೃಷಿಕರು ಹಾಗೂ ಮೀನುಗಾರರ ಕುಟುಂಬಗಳ ಮೇಲೆ ಪರಿಣಾಮ ಬೀರುತ್ತದೆ ಎಂದವರು ಹೇಳಿದ್ದಾರೆ

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News