ನರಮೇಧ ತಡೆಯಲು ಇಸ್ರೇಲ್ ತಕ್ಷಣ ಕ್ರಮ ಕೈಗೊಳ್ಳಬೇಕು : ವಿಶ್ವಸಂಸ್ಥೆ ಮಾನವ ಹಕ್ಕುಗಳ ಮುಖ್ಯಸ್ಥರ ಆಗ್ರಹ

Update: 2024-11-08 14:43 GMT

       PC : PTI

ನ್ಯೂಯಾರ್ಕ್ : ಫೆಲೆಸ್ತೀನೀಯರ ವಿರುದ್ಧ ನರಮೇಧವನ್ನು ತಡೆಗಟ್ಟಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಅಂತರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ಜನವರಿಯಲ್ಲಿ ಜಾರಿಗೊಳಿಸಿದ ತಾತ್ಕಾಲಿಕ ಕ್ರಮಗಳನ್ನು ಇಸ್ರೇಲ್ ಸಂಪೂರ್ಣವಾಗಿ ಮತ್ತು ತಕ್ಷಣ ಅನುಸರಿಸಬೇಕು ಎಂದು ಮಾನವ ಹಕ್ಕುಗಳಿಗಾಗಿನ ವಿಶ್ವಸಂಸ್ಥೆ ಹೈಕಮಿಷನರ್ ವೋಕರ್ ಟರ್ಕ್ ಶುಕ್ರವಾರ ಆಗ್ರಹಿಸಿದ್ದಾರೆ.

ಅಂತರಾಷ್ಟ್ರೀಯ ಕಾನೂನಿನಡಿ ರಾಷ್ಟ್ರಗಳು ತಮ್ಮ ಜವಾಬ್ದಾರಿಗಳನ್ನು ಗೌರವಿಸುವಂತೆ ಮತ್ತು ಸಂಘರ್ಷದಲ್ಲಿ ನಿರತವಾಗಿರುವ ಪಕ್ಷಗಳಿಗೆ ಮಿಲಿಟರಿ ಅಥವಾ ಹಣಕಾಸಿನ ನೆರವನ್ನು ಒದಗಿಸುವುದು ಅಂತರಾಷ್ಟ್ರೀಯ ಕಾನೂನಿನ ಗಂಭೀರ ಉಲ್ಲಂಘನೆ ಉಂಟು ಮಾಡಿದರೆ ಅಂತಹ ಬೆಂಬಲವನ್ನು ನಿಲ್ಲಿಸುವ ನಿಟ್ಟಿನಲ್ಲಿ ಶಸ್ತ್ರಾಸ್ತ್ರಗಳ ವರ್ಗಾವಣೆ ಮತ್ತು ಮಾರಾಟದ ಬಗ್ಗೆ ನಿರ್ಣಯ ಕೈಗೊಳ್ಳುವಂತೆ ರಾಷ್ಟ್ರಗಳಿಗೆ ಟರ್ಕ್ ಕರೆ ನೀಡಿದ್ದಾರೆ.

ಮಾನವ ಹಕ್ಕುಗಳಿಗಾಗಿನ ವಿಶ್ವಸಂಸ್ಥೆ ಹೈಕಮಿಷನ್ ಶುಕ್ರವಾರ ಪ್ರಕಟಿಸಿದ ಹೊಸ ವರದಿಯಲ್ಲಿ ` ರಾಷ್ಟ್ರೀಯ, ಜನಾಂಗೀಯ ಅಥವಾ ಧಾರ್ಮಿಕ ಗುಂಪುಗಳನ್ನು ಸಂಪೂರ್ಣ ಅಥವಾ ಭಾಗಶಃ ನಾಶಗೊಳಿಸುವ ಉದ್ದೇಶದಿಂದ ಕೂಡಿದ್ದರೆ ಇದು (ಇಸ್ರೇಲ್‍ನ ಉಲ್ಲಂಘನೆ) ನರಮೇಧಕ್ಕೆ ಸಮವಾಗಲಿದೆ' ಎಂದು ಎಚ್ಚರಿಕೆ ನೀಡಲಾಗಿದೆ. ಗಾಝಾದ ಸಂಪೂರ್ಣ ವಿನಾಶ ಮತ್ತು ಅಲ್ಲಿನ ಜನರು ಸಾಮೂಹಿಕ ಗುಳೆ ಹೋಗುವಂತೆ ಮಾಡಬೇಕು ಎಂದು ಇಸ್ರೇಲ್‍ನ ಅಧಿಕಾರಿಗಳು ನೀಡಿರುವ ಹೇಳಿಕೆಗಳ ಬಗ್ಗೆ ವರದಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.

ಇಸ್ರೇಲ್ ನರಮೇಧ ನಡೆಸಿದೆ ಎಂದು ಆರೋಪಿಸಿ ದಕ್ಷಿಣ ಆಫ್ರಿಕಾ ಸಲ್ಲಿಸಿದ ದೂರನ್ನು ಪರಿಶೀಲಿಸಿದ್ದ ಐಸಿಜೆ ` ವಿವೇಚನೆಯಿಲ್ಲದೆ ಫೆಲೆಸ್ತೀನೀಯರನ್ನು ಹತ್ಯೆ ಮಾಡುವುದನ್ನು ನಿಲ್ಲಿಸುವಂತೆ ಮತ್ತು ತಕ್ಷಣವೇ ಗಾಝಾದ ಜನರಿಗೆ ಮಾನವೀಯ ನೆರವು ತಲುಪಿಸಲು ಅನುಕೂಲ ಮಾಡುವಂತೆ' ಜನವರಿಯಲ್ಲಿ ಇಸ್ರೇಲ್‍ಗೆ ಸೂಚಿಸಿದೆ.

`ಹೊಸ ವರದಿಯ ಬೆಳಕಿನಲ್ಲಿ ಐಸಿಜೆ ತೀರ್ಪನ್ನು ಇಸ್ರೇಲ್ ಅನುಸರಿಸುವುದು ಈಗ ಇನ್ನಷ್ಟು ನಿರ್ಣಾಯಕ ಮತ್ತು ತುರ್ತು ಅಗತ್ಯವಾಗಿದೆ. ಈ ವರದಿಯು 2023ರ ಅಕ್ಟೋಬರ್ 7ರಿಂದ ಇಸ್ರೇಲ್ ಮತ್ತು ಗಾಝಾದ ಜನತೆ ಅನುಭವಿಸುತ್ತಿರುವ ಭಯಾನಕ ವಾಸ್ತವತೆಯನ್ನು ತೆರೆದಿಟ್ಟಿದೆ. ಮತ್ತು ಬದ್ಧವಾಗಿರುವ ಅಂತರಾಷ್ಟ್ರೀಯ ಕಾನೂನಿನ ಗಂಭೀರ ಉಲ್ಲಂಘನೆಗೆ ಸಂಬಂಧಿಸಿದಂತೆ ನ್ಯಾಯವನ್ನು ಕೋರಿದೆ' ಎಂದು ಟರ್ಕ್ ಪ್ರತಿಪಾದಿಸಿದ್ದಾರೆ.

ಉತ್ತರ ಗಾಝಾದಲ್ಲಿ ಇಸ್ರೇಲ್‍ನ ಕಾರ್ಯಾಚರಣೆಗಳು, ಇಸ್ರೇಲ್ ಹಾಗೂ ಪೂರ್ವ ಜೆರುಸಲೇಂನಲ್ಲಿ ಫೆಲೆಸ್ತೀನ್ ನಿರಾಶ್ರಿತರಿಗಾಗಿ ಕಾರ್ಯ ನಿರ್ವಹಿಸುವ ವಿಶ್ವಸಂಸ್ಥೆಯ ಏಜೆನ್ಸಿಗಳನ್ನು ನಿಷೇಧಿಸುವ ಶಾಸನವನ್ನು ಅಂಗೀಕರಿಸಿರುವುದು ಸೇರಿದಂತೆ ಇತ್ತೀಚಿನ ಘಟನೆಗಳನ್ನು ಗಮನಿಸಿದರೆ ಐಸಿಜೆ ಕ್ರಮಗಳು ಎಂದಿಗಿಂತಲೂ ಈಗ ಹೆಚ್ಚು ಪ್ರಸ್ತುತವಾಗಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News