ಇಸ್ರೇಲ್: ಆಫ್ರಿಕನ್ ವಲಸಿಗರ ಗಡೀಪಾರಿಗೆ ನೆತನ್ಯಾಹು ಆಗ್ರಹ
ಟೆಲ್ಅವೀವ್, ಸ: ಇಸ್ರೇಲ್ ರಾಜಧಾನಿ ಟೆಲ್ಅವೀವ್ನಲ್ಲಿ ಇತ್ತೀಚೆಗೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ಭಾಗಿಯಾಗಿರುವ ಎರೀಟ್ರಿಯಾ ದೇಶದ ವಲಸಿಗರ ಸಹಿತ ಇಸ್ರೇಲ್ನಲ್ಲಿರುವ ಆಫ್ರಿಕಾ ವಲಸಿಗರನ್ನು ತಕ್ಷಣ ದೇಶದಿಂದ ಗಡೀಪಾರು ಮಾಡಲು ಬಯಸಿರುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ರವಿವಾರ ಹೇಳಿದ್ದಾರೆ.
ಇಸ್ರೇಲ್ಗೆ ಓಡಿಬಂದಿರುವ ಎರಿಟ್ರಿಯಾ ವಲಸಿಗರ ಎರಡು ತಂಡಗಳ ನಡುವೆ ಶನಿವಾರ ಟೆಲ್ಅವೀವ್ನಲ್ಲಿ ಘರ್ಷಣೆ ನಡೆದಿತ್ತು. ಎರಿಟ್ರಿಯಾ ಸರಕಾರದ ಪರ ಮತ್ತು ವಿರೋಧಿ ವಲಸಿಗರ ಗುಂಪಿನ ನಡುವೆ ನಡೆದಿದ್ದ ಈ ಘರ್ಷಣೆಯಲ್ಲಿ ಹಲವರು ಗಾಯಗೊಂಡಿದ್ದರು. ಇಟ್ಟಿಗೆ, ಕಲ್ಲು, ದೊಣ್ಣೆಗಳನ್ನು ಹಿಡಿದು ಹಿಂಸಾಚಾರಕ್ಕೆ ಇಳಿದಿದ್ದ ವಲಸಿಗರು ಹಲವು ವಾಹನಗಳು ಹಾಗೂ ಅಂಗಡಿಗಳಿಗೆ ಹಾನಿ ಎಸಗಿದ್ದರು. ಹಿಂಸಾಚಾರದಲ್ಲಿ ತೊಡಗಿದ್ದವರನ್ನು ಚದುರಿಸಲು ಅಶ್ರುವಾಯು ಪ್ರಯೋಗ ವಿಫಲವಾದಾಗ ಪೊಲೀಸರು ಗುಂಡು ಹಾರಿಸಿದ್ದರು.
ಹಿಂಸಾಚಾರದ ಬಳಿಕ ಸಚಿವ ಸಂಪುಟದ ವಿಶೇಷ ಸಭೆ ನಡೆಸಿದ ಪ್ರಧಾನಿ ನೆತನ್ಯಾಹು `ಹಿಂಸಾಚಾರ, ಲೂಟಿಯಲ್ಲಿ ನಿರತರಾಗುವ ವಲಸಿಗರ ವಿರುದ್ಧ ಕಠಿಣ ಕ್ರಮಗಳ ಅಗತ್ಯವಿದೆ. ವಲಸಿಗರ ವಿರುದ್ಧ ಕೆಲವು ಕಠಿಣ ಕ್ರಮಗಳನ್ನು ಸರಕಾರ ಪ್ರಸ್ತಾವಿಸಿದ್ದರೂ ಸುಪ್ರೀಂಕೋರ್ಟ್ ಇದನ್ನು ಒಪ್ಪಿಲ್ಲ. ಆದ್ದರಿಂದ ಸಚಿವರು ಕೆಲವು ಯೋಜನೆಗಳನ್ನು ಸರಕಾರದ ಮುಂದೆ ಇಡುವಂತೆ ' ಕರೆ ನೀಡಿದ್ದಾರೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ಸುಧಾರಣೆಯ ಅಗತ್ಯವನ್ನು ಈ ಪ್ರಕರಣ ಎತ್ತಿತೋರಿಸಿದೆ ಎಂದು ಸರಕಾರದ ಮೂಲಗಳು ಪ್ರತಿಪಾದಿಸಿವೆ.
ಇಸ್ರೇಲ್ನಲ್ಲಿ ಸುಮಾರು 25,000 ಆಫ್ರಿಕನ್ ವಲಸಿಗರಿದ್ದಾರೆ. ಇವರಲ್ಲಿ ಹೆಚ್ಚಿನವರು ಸುಡಾನ್ ಮತ್ತು ಎರೀಟ್ರಿಯಾ ದೇಶದವರು. ಇವರಲ್ಲಿ ಕೆಲವರಿಗೆ ಮಾತ್ರ ಆಶ್ರಯ ಒದಗಿಸುವುದಾಗಿ ಇಸ್ರೇಲ್ ಸರಕಾರ ಸ್ಪಷ್ಟಪಡಿಸಿದ್ದು ಉಳಿದವರಿಗೆ ನೆಲೆ ಕಲ್ಪಿಸಲು ಯಾವುದೇ ಕಾನೂನು ಬದ್ಧತೆ ಹೊಂದಿಲ್ಲ ಎಂದಿದೆ. ದೇಶ ಬಿಟ್ಟು ತೆರಳಲು ಒಪ್ಪಿದರೆ ಮಾತ್ರ ಬಾಕಿ ವೇತನ ಪಾವತಿ, ಅಥವಾ ದೇಶ ಬಿಟ್ಟು ತೆರಳಲು ಒಪ್ಪಿದರೆ ನಗದು ಪುರಸ್ಕಾರ, ಹೀಗೆ ವಲಸಿಗರನ್ನು ದೇಶದಿಂದ ಹೊರಗೆ ಕಳುಹಿಸಲು ವಿವಿಧ ತಂತ್ರಗಳನ್ನು ಇಸ್ರೇಲ್ ಸರಕಾರ ಬಳಸುತ್ತಿದೆ.