ಫೆಲೆಸ್ತೀನ್ ಕುಟುಂಬಗಳ ಗಡೀಪಾರಿಗೆ ಅವಕಾಶ ನೀಡುವ ಕಾನೂನು ಅಂಗೀಕರಿಸಿದ ಇಸ್ರೇಲ್
ಜೆರುಸಲೇಂ : `ಫೆಲೆಸ್ತೀನ್ ಹೋರಾಟಗಾರ'ರ ಕುಟುಂಬದ ಸದಸ್ಯರನ್ನು ಗಡೀಪಾರು ಮಾಡುವ ಅವಕಾಶ ನೀಡುವ ಕಾನೂನನ್ನು ಇಸ್ರೇಲ್ ನ ಸಂಸತ್ತು ಗುರುವಾರ ಅನುಮೋದಿಸಿದೆ.
ಇಸ್ರೇಲ್ ನಲ್ಲಿರುವ ಫೆಲೆಸ್ತೀನಿ ಪ್ರಜೆಗಳು, ಇಸ್ರೇಲ್ ಆಕ್ರಮಿತ ಪೂರ್ವ ಜೆರುಸಲೇಂನ ನಿವಾಸಿಗಳಿಗೆ ಈ ಕಾನೂನು ಅನ್ವಯಿಸುತ್ತದೆ. ತಮ್ಮ ಕುಟುಂಬದ ಸದಸ್ಯರು ದಾಳಿ ನಡೆಸುವ ಬಗ್ಗೆ ಮೊದಲೇ ತಿಳಿದಿದ್ದರೂ ಮಾಹಿತಿ ನೀಡದ ಅಥವಾ ಅವರ ಕೃತ್ಯವನ್ನು ಬೆಂಬಲಿಸುವ, ಹೋರಾಟಗಾರರೊಂದಿಗೆ ಗುರುತಿಸಿಕೊಳ್ಳುವ ಫೆಲೆಸ್ತೀನಿಯರಿಗೆ ಇದು ಅನ್ವಯಿಸುತ್ತದೆ. ಇಂತವರನ್ನು ಗಾಝಾ ಪಟ್ಟಿ ಅಥವಾ ಬೇರೆ ಪ್ರದೇಶಕ್ಕೆ 7ರಿಂದ 20 ವರ್ಷಗಳ ಅವಧಿಗೆ ಗಡೀಪಾರು ಮಾಡಲಾಗುತ್ತದೆ.
ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಲಿಕುಡ್ ಪಾರ್ಟಿ ಹಾಗೂ ಕಟ್ಟಾ ಬಲಪಂಥೀಯ ಮಿತ್ರಪಕ್ಷಗಳು ರೂಪಿಸಿರುವ ಈ ಕಾನೂನಿಗೆ ಇಸ್ರೇಲ್ ಸಂಸತ್ತು 61-41 ಮತಗಳಿಂದ ಅನುಮೋದನೆ ನೀಡಿದೆ. ಈ ಕಾನೂನು ಆಕ್ರಮಿತ ಪಶ್ಚಿಮದಂಡೆಯಲ್ಲಿ ಅನ್ವಯವಾಗುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ. ಪಶ್ಚಿಮದಂಡೆಯಲ್ಲಿ ದಾಳಿಕೋರರ ಕುಟುಂಬದ ಮನೆಗಳನ್ನು ಧ್ವಂಸಗೊಳಿಸುವ ನೀತಿಯನ್ನು ಇಸ್ರೇಲ್ ದೀರ್ಘಾವಧಿಯಿಂದ ಮುಂದುವರಿಸಿಕೊಂಡು ಬಂದಿದೆ.
ಇದು ಸಾಂವಿಧಾನಿಕವಲ್ಲದ ಮತ್ತು ಇಸ್ರೇಲ್ ನ ಪ್ರಮುಖ ಮೌಲ್ಯಗಳನ್ನು ವಿರೋಧಿಸುವ ಕಾನೂನು ಆಗಿದ್ದು ಇದನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಲು ಅವಕಾಶವಿದೆ ಎಂದು ವಿರೋಧ ಪಕ್ಷಗಳ ಮೂಲಗಳು ಹೇಳಿವೆ.