ಗಾಝಾದ ಅಲ್-ಶಿಫಾ ಆಸ್ಪತ್ರೆಗೆ ಮುತ್ತಿಗೆ ಹಾಕಿ ಇಸ್ರೇಲ್ ದಾಳಿ: 400ಕ್ಕೂ ಅಧಿಕ ಫೆಲೆಸ್ತೀನಿಗಳ ಸಾವು
ಹೊಸದಿಲ್ಲಿ: ಅಲ್-ಶಿಫಾ ಆಸ್ಪತ್ರೆಗೆ 13 ದಿನಗಳ ಮುತ್ತಿಗೆ ಸಂದರ್ಭದಲ್ಲಿ ಇಸ್ರೇಲಿ ದಾಳಿಗಳಲ್ಲಿ ರೋಗಿಗಳು, ಯುದ್ಧದಿಂದ ನಿರ್ವಸಿತಗೊಂಡವರು ಮತ್ತು ಆರೋಗ್ಯ ಸಿಬ್ಬಂದಿಗಳು ಸೇರಿದಂತೆ 400ಕ್ಕೂ ಅಧಿಕ ಜನರು ಕೊಲ್ಲಲ್ಪಟ್ಟಿದ್ದಾರೆ ಎಂದು ಗಾಝಾದ ಮಾಧ್ಯಮ ಕಚೇರಿಯು ತಿಳಿಸಿದೆ.
ಅಲ್-ಶಿಫಾ ಮೆಡಿಕಲ್ ಕಾಂಪ್ಲೆಕ್ಸ್‌ಗೆ ನುಗ್ಗಿದ ಬಳಿಕ 13 ದಿನಗಳ ಅವಧಿಯಲ್ಲಿ ಇಸ್ರೇಲಿ ಸೇನೆಯು ವಿನಾಶ,ಬೆಂಕಿ ಹಚ್ಚುವಿಕೆಯ ಅಪರಾಧಗಳನ್ನು ಎಸಗಿದೆ ಮತ್ತು 1,050 ಮನೆಗಳನ್ನು ಗುರಿಯಾಗಿಸಿಕೊಂಡು ದಾಳಿಗಳನ್ನು ನಡೆಸಿ 400ಕ್ಕೂ ಅಧಿಕ ಜನರನ್ನು ಕೊಂದಿದೆ. ನೂರಾರು ರೋಗಿಗಳು,ಯುದ್ಧದಿಂದ ನಿರ್ವಸಿತಗೊಂಡವರು ಮತ್ತು ಆರೋಗ್ಯ ಸಿಬ್ಬಂದಿಗಳನ್ನು ಬಂಧಿಸಿ ಚಿತ್ರಹಿಂಸೆ ನೀಡುತ್ತಿದೆ ಎಂದು ಹೇಳಿರುವ ಮಾಧ್ಯಮ ಕಚೇರಿಯು,ಇಸ್ರೇಲಿ ಸೇನೆಯು ಈಗಲೂ ಅಲ್-ಶಿಫಾ ಕಾಂಪ್ಲೆಕ್ಸ್‌ನಲ್ಲಿ 30 ಗಾಲಿಕುರ್ಚಿ ಅವಲಂಬಿತರು ಸೇರಿದಂತೆ 107 ರೋಗಿಗಳು,ಸುಮಾರು 60 ವೈದ್ಯಕೀಯ ಸಿಬ್ಬಂದಿಗಳನ್ನು ನೀರು,ಔಷಧಿ,ಆಹಾರ ಮತ್ತು ವಿದ್ಯುತ್ ಸಂಪರ್ಕವಿಲ್ಲದೆ ಅಮಾನವೀಯ ಸ್ಥಿತಿಯಲ್ಲಿ ಒತ್ತೆಯಾಳುಗಳನ್ನಾಗಿ ಹಿಡಿದಿಟ್ಟುಕೊಂಡಿದೆ. ಅಂತರರಾಷ್ಟ್ರೀಯ ಸಂಸ್ಥೆಗಳ ಮೂಲಕ ರೋಗಿಗಳನ್ನು ತೆರವುಗೊಳಿಸುವ ಎಲ್ಲ ಪ್ರಯತ್ನಗಳನ್ನು ತಡೆಯುವ ಮೂಲಕ ಇಸ್ರೇಲಿ ಸೇನೆಯು ಅವರ ಜೀವಗಳನ್ನು ಅಪಾಯಕ್ಕೆ ತಳ್ಳಿದೆ ಎಂದು ತಿಳಿಸಿದೆ.
ಗಾಝಾ ಆರೋಗ್ಯ ಸಚಿವಾಲಯದ ಇತ್ತೀಚಿನ ಅಂಕಿಅಂಶಗಳಂತೆ ಕಳೆದ 24 ಗಂಟೆಗಳಲ್ಲಿ ಇಸ್ರೇಲಿ ದಾಳಿಗಳಲ್ಲಿ ಕನಿಷ್ಠ 82 ಫೆಲೆಸ್ತೀನಿಗಳು ಕೊಲ್ಲಲ್ಪಟ್ಟಿದ್ದಾರೆ ಮತ್ತು 98 ಜನರು ಗಾಯಗೊಂಡಿದ್ದಾರೆ.
ಅ.7ರಂದು ಇಸ್ರೇಲ್ ಗಾಝಾದ ಮೇಲೆ ದಾಳಿಗಳನ್ನು ಆರಂಭಿಸಿದಾಗಿನಿಂದ ಕನಿಷ್ಠ 32,705 ಫೆಲೆಸ್ತೀನಿಗಳು ಕೊಲ್ಲಲ್ಪಟ್ಟಿದ್ದಾರೆ ಮತ್ತು 75,190 ಜನರು ಗಾಯಗೊಂಡಿದ್ದಾರೆ. ಮೃತಪಟ್ಟವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳಾಗಿದ್ದಾರೆ.