ರಮಝಾನ್ ಸಂದರ್ಭ ಆರಾಧಕರಿಗೆ ಅಲ್-ಅಕ್ಸಾ ಮಸೀದಿ ಪ್ರವೇಶಿಸಲು ಅವಕಾಶ : ಇಸ್ರೇಲ್

Update: 2024-03-06 16:41 GMT

ಟೆಲ್‍ಅವೀವ್: ರಮಝಾನ್‍ನ ಮೊದಲ ವಾರದಲ್ಲಿ ಜೆರುಸಲೇಂನಲ್ಲಿನ ಅಲ್-ಅಕ್ಸಾ ಮಸೀದಿಯನ್ನು ಪ್ರವೇಶಿಸಲು ಹಿಂದಿನ ವರ್ಷಗಳಷ್ಟೇ ಪ್ರಮಾಣದಲ್ಲಿ ಇಸ್ರೇಲ್ ನ ಮುಸ್ಲಿಂ ಆರಾಧಕರಿಗೆ ಅವಕಾಶ ನೀಡಲಾಗುವುದು ಎಂದು ಇಸ್ರೇಲ್ ಪ್ರಧಾನಿಯ ಕಚೇರಿಯ ಹೇಳಿಕೆ ತಿಳಿಸಿದೆ.

`ರಮಝಾನ್ ಮುಸ್ಲಿಮರಿಗೆ ಪವಿತ್ರವಾಗಿದೆ. ಪ್ರತೀ ವರ್ಷದಂತೆ ಈ ವರ್ಷವೂ ಅದರ ಪಾವಿತ್ರ್ಯತೆಯನ್ನು ಎತ್ತಿಹಿಡಿಯಲಾಗುವುದು' ಎಂದು ಇಸ್ರೇಲ್ ಸರಕಾರ ಹೇಳಿದೆ. ಈ ಬಗ್ಗೆ ಚರ್ಚಿಸಲು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಂಗಳವಾರ ಎಲ್ಲಾ ಭದ್ರತಾ ಏಜೆನ್ಸಿಗಳ ಸಭೆ ಕರೆದಿದ್ದರು. ಪ್ರತೀ ವಾರ ಭದ್ರತೆ ಮತ್ತು ಸುರಕ್ಷತೆಯ ವಿಷಯದಲ್ಲಿ ಪರಿಸ್ಥಿತಿಯ ಮೌಲ್ಯಮಾಪನ ನಡೆಸಿ ಅದರಂತೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸರಕಾರದ ಮೂಲಗಳು ಹೇಳಿವೆ.

ಪಶ್ಚಿಮ ದಂಡೆಯ ಫೆಲೆಸ್ತೀನ್ ನಿವಾಸಿಗಳು ರಮಝಾನ್ ಸಂದರ್ಭ ಜೆರುಸಲೇಂನಲ್ಲಿ ಪ್ರಾರ್ಥನೆ ನಡೆಸಲು ಅನುಮತಿ ನೀಡಬಾರದು ಎಂದು ಇಸ್ರೇಲ್‍ನ ರಾಷ್ಟ್ರೀಯ ಭದ್ರತಾ ಸಚಿವ ಇಟಮರ್ ಬೆನ್‍ಗ್ವಿರ್ ಇತ್ತೀಚೆಗೆ ಸರಕಾರವನ್ನು ಆಗ್ರಹಿಸಿದ್ದರು. `ನಾವು `ರಿಸ್ಕ್' ತೆಗೆದುಕೊಳ್ಳಲಾಗದು. ಮಹಿಳೆಯರನ್ನು ಮತ್ತು ಮಕ್ಕಳನ್ನು ಒತ್ತೆಯಾಳಾಗಿ ಇರಿಸಿಕೊಳ್ಳಲು ಹಮಾಸ್‍ಗೆ ಅವಕಾಶ ನೀಡಬಾರದು' ಎಂದವರು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಅಮೆರಿಕ ಅಲ್-ಅಕ್ಸಾ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಮುಸ್ಲಿಮರಿಗೆ ಅವಕಾಶ ನೀಡುವಂತೆ ಇಸ್ರೇಲ್‍ಗೆ ಕರೆ ನೀಡಿತ್ತು.

`ಇದು ಜನರಿಗೆ ಅರ್ಹವಾದ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡುವ ವಿಷಯ ಮಾತ್ರವಲ್ಲ, ಇಸ್ರೇಲ್‍ನ ಭದ್ರತೆಗೆ ಸಂಬಂಧಿಸಿದ ಮಹತ್ವದ ವಿಷಯವಾಗಿದೆ. ಪಶ್ಚಿಮದಂಡೆಯಲ್ಲಿ ಅಥವಾ ವಿಶಾಲ ಪ್ರದೇಶದಲ್ಲಿ ಪರಿಸ್ಥಿತಿ ಉದ್ವಿಗ್ನಗೊಳ್ಳುವುದು ಇಸ್ರೇಲ್‍ನ ಹಿತಾಸಕ್ತಿಗೆ ವಿರುದ್ಧವಾಗಿದೆ' ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲ್ಲರ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News