ರಫಾದ ಮೇಲೆ ಇಸ್ರೇಲ್ ವಾಯುದಾಳಿ ; ಕನಿಷ್ಠ 45 ಮಂದಿ ಮೃತ್ಯು
ಗಾಝಾ: ಗಾಝಾದ ರಫಾ ನಗರದ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಸ್ಥಳಾಂತರಿಸಿದ ಫೆಲೆಸ್ತೀನೀಯರಿದ್ದ ಶಿಬಿರ ಬೆಂಕಿ ಹೊತ್ತಿಕೊಂಡು ಉರಿದಿದ್ದು ಕನಿಷ್ಠ 45 ಮಂದಿ ಸಾವನ್ನಪ್ಪಿದ್ದು ಹಲವರು ಗಾಯಗೊಂಡಿರುವುದಾಗಿ ವರದಿಯಾಗಿದೆ.
ಅಪಾರ ಪ್ರಮಾಣದ ಸಾವು-ನೋವಿನ ಬಗ್ಗೆ ಜಾಗತಿಕ ಮುಖಂಡರು ಕಳವಳ ವ್ಯಕ್ತಪಡಿಸಿದ್ದು ಇಸ್ರೇಲ್ ದಾಳಿಯನ್ನು ನಿಲ್ಲಿಸಬೇಕೆಂದು ಜಾಗತಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ತಕ್ಷಣ ಜಾರಿಗೊಳಿಸಬೇಕೆಂದು ಆಗ್ರಹಿಸಿದ್ದಾರೆ. ನಿಖರ ಗುಪ್ತಚರ ಮಾಹಿತಿಯ ಆಧಾರದಲ್ಲಿ ರಫಾ ನಗರದಲ್ಲಿ ಹಮಾಸ್ ನೆಲೆಯ ಕಂಪೌಂಡ್ ಅನ್ನು ಗುರಿಯಾಗಿಸಿ ವಾಯುಪಡೆ ನಿಖರ ದಾಳಿ ನಡೆಸಿರುವುದಾಗಿ ಇಸ್ರೇಲ್ ಸೇನೆ ಹೇಳಿದೆ. ಪೂರ್ವ ರಫಾದಲ್ಲಿ 2 ವಾರಗಳ ಹಿಂದೆ ಇಸ್ರೇಲ್ ಭೂದಾಳಿ ಆರಂಭಿಸಿದ ಹಿನ್ನೆಲೆಯಲ್ಲಿ ಅಲ್ಲಿಂದ ಸ್ಥಳಾಂತರಗೊಂಡಿದ್ದವರು ನೆಲೆಸಿದ್ದ ಪಶ್ಚಿಮ ರಫಾದ ಟೆಲ್‍ಅಲ್-ಸುಲ್ತಾನ್ ಪ್ರದೇಶದಲ್ಲಿದ್ದ ಶಿಬಿರಗಳ ಮೇಲೆ ದಾಳಿ ನಡೆದಿದೆ. ರಫಾದಲ್ಲಿನ ಕ್ಷೇತ್ರ ಆಸ್ಪತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗಾಯಾಳುಗಳನ್ನು ದಾಖಲಿಸಲಾಗಿದೆ. ಇತರ ಆಸ್ಪತ್ರೆಗಳೂ ಗಾಯಾಳುಗಳಿಂದ ತುಂಬಿದೆ ಎಂದು ಅಂತರಾಷ್ಟ್ರೀಯ ರೆಡ್‍ಕ್ರಾಸ್ ಸಮಿತಿ ಹೇಳಿದೆ. ರಫಾದ ಶಿಬಿರದ ಮೇಲೆ ನಡೆದಿರುವ ದಾಳಿಯನ್ನು `ಹತ್ಯಾಕಾಂಡ'ವೆಂದು ಬಣ್ಣಿಸಿರುವ ಹಮಾಸ್‍ನ ಉನ್ನತ ಅಧಿಕಾರಿ ಸಮಿ ಅಬುಝುಹ್ರಿ, ಇಸ್ರೇಲ್‍ಗೆ ಶಸ್ತ್ರಾಸ್ತ್ರ ಮತ್ತು ಆರ್ಥಿಕ ನೆರವು ಒದಗಿಸುತ್ತಿರುವ ಅಮೆರಿಕ ಇದಕ್ಕೆ ಹೊಣೆಯಾಗಿದೆ ಎಂದಿದ್ದಾರೆ. ವಾಯುದಾಳಿಯ ಬಳಿಕ ಬೆಂಕಿ ದುರಂತದಿಂದ ಪ್ರದೇಶದ ಹಲವು ನಾಗರಿಕರಿಗೆ ಹಾನಿಯಾಗಿರುವ ವರದಿಯನ್ನು ಗಮನಿಸಿದ್ದು ಇದನ್ನು ಪರಿಶೀಲಿಸಲಾಗುತ್ತಿದೆ ಎಂದು ಇಸ್ರೇಲ್ ಭದ್ರತಾ ಪಡೆ(ಐಡಿಎಫ್) ಹೇಳಿದೆ.
ವಾರ್ತಾ ಭಾರತಿ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು https://whatsapp.com/channel/0029VaA8ju86LwHn9OQpEq28 ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.