ಗಾಝಾ ನಗರವನ್ನು ಸುತ್ತುವರಿದ ಇಸ್ರೇಲ್ ಪಡೆ

Update: 2023-11-06 15:27 GMT

Photo- PTI

ಟೆಲ್‍ಅವೀವ್: ಇಸ್ರೇಲ್ ಸೇನೆ ಗಾಝಾ ನಗರವನ್ನು ಸುತ್ತುವರಿದಿದ್ದು ಉತ್ತರ ಗಾಝಾವನ್ನು ದಕ್ಷಿಣದಿಂದ ಕಡಿತಗೊಳಿಸಿದೆ. ಯುದ್ಧದಲ್ಲಿ ಇದು ಅತ್ಯಂತ ಮಹತ್ವದ ಹಂತವಾಗಿದೆ ಎಂದು ಇಸ್ರೇಲ್ ಸರಕಾರ ಸೋಮವಾರ ಘೋಷಿಸಿದೆ.

ಗಾಝಾ ನಗರದೊಳಗೆ ಪ್ರವೇಶಿಸುವುದಕ್ಕೂ ಮುನ್ನ ಉತ್ತರ ಗಾಝಾವನ್ನು ಇತರ ಪ್ರದೇಶದಿಂದ ಪ್ರತ್ಯೇಕಿಸುವಲ್ಲಿ ಇಸ್ರೇಲ್ ಪಡೆ ಸಫಲವಾಗಿದೆ ಎಂದು `ಅಸೋಸಿಯೇಟೆಡ್ ಪ್ರೆಸ್' ವರದಿ ಮಾಡಿದೆ. ಯಾವುದೇ ಕ್ಷಣದಲ್ಲಿ ಸೇನೆ ನಗರದೊಳಗೆ ನುಗ್ಗಬಹುದು. ಆದರೆ ನಗರದೊಳಗಿನ ವಿಶಾಲ ಸುರಂಗ ಜಾಲಗಳನ್ನು ಬಳಸಿಕೊಂಡು ಹಮಾಸ್ ಬೀದಿ ಬೀದಿಯಲ್ಲಿ ಹೋರಾಡುವ ನಿರೀಕ್ಷೆಯಿದೆ ಎಂದು ವರದಿ ಹೇಳಿದೆ.

ಗಾಝಾ ಪಟ್ಟಿಯಲ್ಲಿ ಉಳಿದುಕೊಂಡಿರುವ ಫೆಲೆಸ್ತೀನೀಯರು ದಕ್ಷಿಣದತ್ತ ಸ್ಥಳಾಂತರಗೊಳ್ಳಲು `ಏಕಮುಖ' ಕಾರಿಡಾರ್ ತೆರೆಯಲಾಗಿದ್ದು ಇದನ್ನು ಬಳಸಬಹುದು ಎಂದು ಇಸ್ರೇಲ್ ಹೇಳಿದೆ. ಈ ಮಧ್ಯೆ, ರವಿವಾರ ರಾತ್ರಿ ಮತ್ತೆ ಗಾಝಾ ಪ್ರದೇಶದಲ್ಲಿ ಮೊಬೈಲ್ ಫೋನ್ ಮತ್ತು ಇಂಟರ್ನೆಟ್ ಸಂಪರ್ಕ ಕಡಿತಗೊಂಡಿದ್ದು ಸೋಮವಾರ ಕೆಲವೆಡೆ ಮರುಸಂಪರ್ಕ ಕಲ್ಪಿಸಲಾಗಿದೆ ಎಂದು ಫೆಲೆಸ್ತೀನಿಯನ್ ಟೆಲಿಕಾಂ ಸಂಸ್ಥೆ ಹೇಳಿದೆ.

ಕೆಲವು ಪ್ರಮುಖ ಬೆಳವಣಿಗೆಗಳು:

► ಒಂದು ತಿಂಗಳಿಂದ ಮುಂದುವರಿದಿರುವ ಯುದ್ಧದಲ್ಲಿ 10,022 ಫೆಲೆಸ್ತೀನೀಯರು ಹತರಾಗಿರುವುದಾಗಿ ಗಾಝಾದ ಆರೋಗ್ಯ ಇಲಾಖೆ ಹೇಳಿದೆ.

► ಗಾಝಾದಲ್ಲಿ ಆಹಾರ, ಇಂಧನ, ನೀರು, ಔಷಧಗಳ ಕೊರತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಇಲ್ಲಿನ ಜನಸಂಖ್ಯೆಯ ಸುಮಾರು 70%ದಷ್ಟು ಫೆಲೆಸ್ತೀನೀಯರು(1.5 ದಶಲಕ್ಷ) ಯುದ್ಧ ಆರಂಭಗೊಂಡಂದಿನಿಂದ ಇಲ್ಲಿಂದ ಪಲಾಯ ಮಾಡಿದ್ದಾರೆ.

► ಮಾನವೀಯ ನೆರವು ವಿತರಣೆಗೆ ಅನುಕೂಲವಾಗುವಂತೆ ಹೋರಾಟದಲ್ಲಿ ವಿರಾಮಕ್ಕೆ ಅಮೆರಿಕ, ಜೋರ್ಡನ್, ಈಜಿಪ್ಟ್ ದೇಶಗಳ ಆಗ್ರಹವನ್ನು ಇಸ್ರೇಲ್ ತಳ್ಳಿಹಾಕಿದೆ.

► ಅ. 21ರಿಂದ ಈಜಿಪ್ಟ್ ಮೂಲಕ ನೆರವು ಸಾಮಾಗ್ರಿಗಳನ್ನು ಸಾಗಿಸುವ 450ಕ್ಕೂ ಹೆಚ್ಚು ಟ್ರಕ್‍ಗಳು ಗಾಝಾ ಪ್ರವೇಶಿಸಿವೆ. ಆದರೆ ಬೇಡಿಕೆ ಹೆಚ್ಚಿರುವುದರಿಂದ ಇದು ಸಾಕಾಗುವುದಿಲ್ಲ ಎಂದು ಮಾನವೀಯ ನೆರವು ಸಂಸ್ಥೆಗಳ ಕಾರ್ಯಕರ್ತರು ಹೇಳಿದ್ದಾರೆ.

► ಸೋಮವಾರ ಪೂರ್ವ ಜೆರುಸಲೇಂನಲ್ಲಿ ಫೆಲೆಸ್ತೀನ್ ಆಕ್ರಮಣಕಾರ ಇಸ್ರೇಲ್‍ನ ಮಹಿಳಾ ಸೈನಿಕನ ಮೇಲೆ ಚೂರಿಯಿಂದ ದಾಳಿ ನಡೆಸಿದ್ದು ಆತನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News