ಗಾಝಾದ ರಫಾ ಕ್ರಾಸಿಂಗ್‌ನ ಫೆಲೆಸ್ತೀನಿ ಭಾಗವನ್ನು ವಶಕ್ಕೆ ಪಡೆದ ಇಸ್ರೇಲಿ ಪಡೆಗಳು
ಟೆಲ್‍ಅವೀವ್: ಕದನ ವಿರಾಮ ಮತ್ತು ಒತ್ತೆಯಾಳು ಬಿಡುಗಡೆ ಪ್ರಸ್ತಾವನೆಗೆ ಹಮಾಸ್ ಒಪ್ಪಿಗೆಯ ಹೊರತಾಗಿಯೂ, ಗಾಝಾದಲ್ಲಿ ತನ್ನ ಕಾರ್ಯಾಚರಣೆಯನ್ನು ಮುಂದುವರಿಸುವುದಾಗಿ ಇಸ್ರೇಲ್ ಘೋಷಿಸಿದ್ದು ರಫಾದ ಮೇಲೆ ವೈಮಾನಿಕ ದಾಳಿ ಆರಂಭಿಸಿದೆ. ಈ ಮಧ್ಯೆ, ಇಸ್ರೇಲ್‍ನ ಯುದ್ಧಕಾಲದ ಸಚಿವ ಸಂಪುಟವು ಗಾಝಾ ಕಾರ್ಯಾಚರಣೆಯನ್ನು ಸರ್ವಾನುಮತದಿಂದ ಅನುಮೋದಿಸಿದೆ ಎಂದು ವರದಿಯಾಗಿದೆ.
ಹಮಾಸ್ ಪ್ರತಿಪಾದಿಸಿರುವ ಕದನ ವಿರಾಮದ ಷರತ್ತುಗಳು ಇಸ್ರೇಲ್‍ನ ಆಶಯಕ್ಕೆ ವಿರುದ್ಧವಾಗಿವೆ. ಆದ್ದರಿಂದ ರಫಾ ಕಾರ್ಯಾಚರಣೆ ಯೋಜಿತ ರೀತಿಯಲ್ಲಿ ಮುಂದುವರಿಯಲಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಆದರೂ, ಕದನ ವಿರಾಮ ಒಪ್ಪಂದದ ಬಗ್ಗೆ ಈಜಿಪ್ಟ್ ನ ಕೈರೋದಲ್ಲಿ ಮಂಗಳವಾರ ಆರಂಭಗೊಳ್ಳುವ ಮತ್ತೊಂದು ಸುತ್ತಿನ ಮಾತುಕತೆಯಲ್ಲಿ ಇಸ್ರೇಲ್‍ನ ಉನ್ನತ ಮಟ್ಟದ ನಿಯೋಗ ಪಾಲ್ಗೊಳ್ಳಲಿದೆ ಎಂದು ನೆತನ್ಯಾಹು ಸ್ಪಷ್ಟಪಡಿಸಿದ್ದಾರೆ. ಈ ಮಧ್ಯೆ, ರಫಾ ಗಡಿದಾಟಿ(ಕ್ರಾಸಿಂಗ್)ನ ಗಾಝಾ ಬದಿಯ ನಿಯಂತ್ರಣವನ್ನು ಇಸ್ರೇಲ್ ಪಡೆ ಪಡೆದುಕೊಂಡಿರುವುದಾಗಿ ವರದಿಯಾಗಿದೆ. ಕೆರೆಮ್ ಶಲೋಮ್ ಗಡಿದಾಟನ್ನು ಮುಚ್ಚಲಾಗಿದ್ದು ಭದ್ರತಾ ಪರಿಸ್ಥಿತಿ ಸುಧಾರಿಸಿದ ಬಳಿಕ ತೆರೆಯುವುದಾಗಿ ಇಸ್ರೇಲ್ ಸೇನೆ ಹೇಳಿದೆ. ರಫಾ ನಗರಕ್ಕೆ ಸೀಮಿತ ಪ್ರಮಾಣದ ದಾಳಿ ನಡೆಸುವ ಮೂಲಕ ಹಮಾಸ್‍ನ ಮೇಲೆ ಒತ್ತಡ ಹೇರುವುದು ಇಸ್ರೇಲ್‍ನ ಯೋಜನೆಯಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸಿಎನ್‍ಎನ್ ವರದಿ ಮಾಡಿದೆ.
ದಕ್ಷಿಣ ಗಾಝಾ ಪಟ್ಟಿಯ ಪೂರ್ವ ರಫಾದಲ್ಲಿ ಹಮಾಸ್ ವಿರುದ್ಧ ಉದ್ದೇಶಿತ ದಾಳಿ ನಡೆಸಲಾಗುತ್ತಿದೆ. ನಮ್ಮ ಒತ್ತೆಯಾಳುಗಳ ಬಿಡುಗಡೆ ಹಾಗೂ ಇತರ ಉದ್ದೇಶಗಳಿಗಾಗಿ ಹಮಾಸ್‍ನ ಮೇಲೆ ಒತ್ತಡ ಹೇರಲು ರಫಾದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ' ಎಂದು ಇಸ್ರೇಲ್ ಭದ್ರತಾ ಪಡೆಯ ಹೇಳಿಕೆ ತಿಳಿಸಿದೆ. ರಫಾ ನಗರದ ಮೇಲೆ ಸೋಮವಾರ ರಾತ್ರಿಯಿಡೀ ಬಾಂಬ್‍ದಾಳಿ ನಡೆಸಲಾಗಿದೆ. ದಾಳಿಯಲ್ಲಿ ಕನಿಷ್ಟ 5 ಮಂದಿ ಸಾವನ್ನಪ್ಪಿದ್ದು ಇತರ ಹಲವರು ಗಾಯಗೊಂಡಿರುವುದಾಗಿ ರಫಾದಲ್ಲಿನ ಕುವೈಟಿ ಆಸ್ಪತ್ರೆಯ ಮೂಲಗಳು ವರದಿ ಮಾಡಿವೆ. ರಫಾ ಪ್ರದೇಶದಲ್ಲಿ 50ಕ್ಕೂ ಹೆಚ್ಚು ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆದಿರುವುದಾಗಿ ಇಸ್ರೇಲ್ ಮಿಲಿಟರಿ ವಕ್ತಾರ ಡೇನಿಯಲ್ ಹಗಾರಿ ಹೇಳಿದ್ದಾರೆ. ಇಸ್ರೇಲ್ ದಾಳಿಗೆ ಪ್ರತಿಯಾಗಿ ಗಾಝಾದಿಂದ ದಕ್ಷಿಣ ಇಸ್ರೇಲ್‍ನತ್ತ ರಾಕೆಟ್‍ಗಳನ್ನು ಪ್ರಯೋಗಿಸಿರುವುದಾಗಿ ಹಮಾಸ್ ಹೇಳಿದೆ. ಈ ಮಧ್ಯೆ, ಹಮಾಸ್ ಮುಂದಿರಿಸಿರುವ ಕದನ ವಿರಾಮ ಪ್ರಸ್ತಾವನೆಯನ್ನು ತನ್ನ ಆಡಳಿತ ಪರಿಶೀಲಿಸುತ್ತಿರುವುದರಿಂದ ರಫಾದ ಮೇಲೆ ಆಕ್ರಮಣ ಆರಂಭಿಸದಂತೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಇಸ್ರೇಲ್‍ಗೆ ಎಚ್ಚರಿಕೆ ನೀಡಿರುವುದಾಗಿ ವರದಿಯಾಗಿದೆ.